ಕ್ರೀಡೆ

ಫೈನಲ್​ ಪಂದ್ಯಕ್ಕೂ ಮುನ್ನ ವಿನೇಶ್​ ಪೋಗಟ್​ ಅನರ್ಹ; ಚರ್ಚೆಗೆ ಒತ್ತಾಯಿಸಿ ಸಭಾತ್ಯಾಗ ಮಾಡಿದ ವಿಪಕ್ಷಗಳು

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ ಕುಸ್ತಿ ಫೈನಲ್​ ಪಂದ್ಯಕ್ಕೂ ಮುನ್ನ ತೂಕದ ವಿಚಾರವಾಗಿ ಆನರ್ಹಗೊಂಡ ವಿನೇಶ್​ ಪೋಗಟ್​ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡದ್ದಕ್ಕೆ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದಾರೆ.

ನಿನ್ನೆ (ಆಗಸ್ಟ್​ 07) ಫೈನಲ್​ ಪಂದ್ಯಕ್ಕೂ ಮುನ್ನ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿನೇಶ್​ ಪೋಗಟ್​ರನ್ನು ಅನರ್ಹಗೊಳಿಸಲಾಗಿತ್ತು. ಈ ವಿಚಾರವನ್ನು ಕೇಂದ್ರ ಸಚಿವ ಮನ್ಸುಖ್​ ಮಾಂಡವೀಯಾ ಲೋಕಸಭೆಯಲ್ಲಿ ತಿಳಿಸಿದ್ದರು. ಇದಲ್ಲದೆ ಭಾರತೀಯ ಕುಸ್ತಿ ಫೆಡರೇಷನ್​ ಒಲಿಂಪಿಕ್ಸ್ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿ ವಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

ಇಂದು (ಆಗಸ್ಟ್​ 08) ನಡೆದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಸಭಾಪತಿಗಳಾದ ಜಗದೀಪ್​ ಧನ್​ಕರ್​ ಅವರಿಗೆ ಮನವಿ ಮಾಡಿದರು. ಆದರೆ, ಸಭಾಪತಿಗಳು ಇದಕ್ಕೆ ಅವಕಾಶ ನೀಡದಿದ್ದಾಗ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಇಡೀ ದೇಶವು ವಿನೇಶ್ ಪೋಗಟ್​ ಅವರೊಂದಿಗಿದೆ. ದುರದೃಷ್ಟವಶಾತ್, ನಾವು ಇದನ್ನು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಿಭಜಿಸುತ್ತಿದ್ದೇವೆ ಎಂದು ವಿಪಕ್ಷಗಳ ನಡೆಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ಯಸಭೆ ಸದಸ್ಯ ರಣದೀಪ್​ ಸುರ್ಜೆವಾಲಾ, ಇಡೀ ದೇಶವೇ ಆಕೆ ಸ್ಟ್ರಾಂಗ್​ ಕಮ್​ಬ್ಯಾಕ್​ ಮಾಡುತ್ತಾಳೆ ಎಂಬ ನಂಬಿಕೆಯೊಂದಿಗೆ ಎದುರು ನೋಡುತ್ತಿದೆ. ಆದರೆ, ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾಕಿಷ್ಟು ಮೌನ ವಹಿಸುತ್ತಿದೆ ಎಂಬ ವಿಚಾರ ನಮಗೆ ಅರ್ಥವಾಗುತ್ತಿಲ್ಲ. ಈ ಪದಕ ವಿನೇಶ್​ ಮಾತ್ರವಲ್ಲ ಇಡೀ ದೇಶಕ್ಕೆ ಸೇರಬೇಕಾಗಿದ್ದು, ದುರಾದೃಷ್ಟಾವಶಾತ್​ ಕ್ರೀಡಾ ಸಚಿವರು ಆಕೆಗೆ ಖರ್ಚು ಮಾಡಿದ 17 ಲಕ್ಷ ರೂಪಾಯಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಪದಕದ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಸಂಸದ ದೀಪೇಂದರ್​ ಹೂಡ ಮಾತನಾಡಿ, ನನ್ನ ಪ್ರಕಾರ ವಿನೇಶ್​ ಸೋತಿಲ್ಲ. ಕೋಟ್ಯಂತರ ಮನಸ್ಸುಗಳನ್ನು ಗೆದ್ದಿದ್ದಾಳೆ. ಇಲ್ಲಿ ಪ್ರಮುಖವಾಗಿ ಹೇಳಬೇಕೆಂದರೆ ಕ್ರೀಡಾ ವ್ಯವಸ್ಥೆ ಸೋತಿದೆ. ಚಿನ್ನದ ಪದಕ ವಿಜೇತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಆಕೆಗೆ ನೀಡಬೇಕು. ಹರಿಯಾಣದಲ್ಲಿ ಒಂದು ರಾಜ್ಯಸಭಾ ಸ್ಥಾನ ಖಾಲಿಯಿದ್ದು, ಸರ್ಕಾರ ಆಕೆಯನ್ನು ನಾಮನಿರ್ದೇಶನ ಮಾಡಬೇಕು. ಏಕೆಂದರೆ ಅವಳು ಜಗತ್ತಿಗೆ ಮತ್ತು ದೇಶಕ್ಕೆ ಸ್ಫೂರ್ತಿ, ಧೈರ್ಯದ ಸಂಕೇತವಾಗಿ ಹೊರಹೊಮ್ಮಿದ್ದಾಳೆ ಎಂದು ದೀಪೇಂದರ್​ ಹೂಡಾ ಹೇಳಿದ್ದಾರೆ.