ಕ್ರೀಡೆ

ಟಿಟ್ ಫಾರ್ ಟಾಟ್ ಒಳ್ಳೆಯದಲ್ಲ; ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಭಾಗಿ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಪಿಸಿಬಿ ಮಾಜಿ ಅಧ್ಯಕ್ಷ

ನವದೆಹಲಿ: ಚುಟುಕು ವಿಶ್ವ ಸಮರದಲ್ಲಿ ಗೆದ್ದು ಭಾರೀ ಹುಮ್ಮಸ್ಸಿನಲ್ಲಿರುವ ಟೀಮ್​ ಇಂಡಿಯಾ ನೂತನ ಕೋಚ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಸಜ್ಜಾಗುತ್ತಿದೆ. 2013ರಲ್ಲಿ ಕ್ಯಾಪ್ಟನ್​ ಕೂಲ್​ ಎಂ.ಎಸ್. ಧೋನಿ ನಾಯಕತ್ವದಲ್ಲಿ ಕಡೆಯದಾಗಿ ಟ್ರೋಫಿ ಎತ್ತಿ ಹಿಡಿದ್ದ ಭಾರತ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್​ ಪಂದ್ಯದಲ್ಲಿ ಮುಗ್ಗರಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ ಗೆದ್ದು ಕಪ್​ಅನ್ನು ವಾಪಸ್​ ತರುವ ಬಗ್ಗೆ ರೋಹಿತ್​ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವೆಂಬಂತೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

2025ರಲ್ಲಿ ನಡೆಯುವ ಚಾಂಪಿಯನ್ಸ್ಟ್​ ಟ್ರೋಫಿಗೆ ಈ ಬಾರಿ ಹಾಲಿ ಚಾಂಪಿಯನ್ಸ್​ ಪಾಕಿಸ್ತಾನ ಆತಿಥ್ಯ ವಹಿಸುತ್ತಿದ್ದು, ತಂಡಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿವೆ. ಆದರೆ, ಈ ಬಾರಿಯ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡ ಭಾಗವಹಿಸುವುದು ಡೌಟ್​ ಎಂದು ಹೇಳಲಾಗಿದೆ. ಈಗಾಗಲೇ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸುವ ಬಗ್ಗೆ ತನ್ನ ನಿರ್ಧಾರವನ್ನು ಸರ್ಕಾರ ಹಾಗೂ ಐಸಿಸಿಗೆ ತಿಳಿಸಿದ್ದು, ಇವರುಗಳ ನಿರ್ಧಾರದ ಮೇಲೆ ಭಾರತದ ಭಾಗವಹಿಸುವಿಕೆ ಆಧರಿಸಿದೆ. ಬಿಸಿಸಿಐ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸುವಂತೆ ಮನವಿ ಮಾಡಿದೆ. ಐಸಿಸಿ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಏಕೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಅನೇಕ ವರ್ಷಗಳಿಂದ ವರ್ಷ ಕಳೆದಂತೆ ಉಲ್ಬಣಗೊಳ್ಳುತ್ತಿದ್ದು, ಎರಡು ದೇಶಗಳು ಐಸಿಸಿ ನಡೆಸುವ ಟೂರ್ನಮೆಂಟ್​ಗಳಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ಬಹಳ ವರ್ಷಗಳಾಗಿದ್ದು, ಪ್ರತಿ ಬಾರಿಯೂ ಈ ಎರಡು ತಂಡಗಳು ಮುಖಾಮುಖಿಯಾದಾಗ ಯುದ್ಧದಂತೆ ಭಾಸವಾಗುತ್ತದೆ. ಆದರೆ, ಭಾರತದ ಆಟಗಾರರನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಮಾಜಿ ಅಧ್ಯಕ್ಷ ಹೇಳಿಕೆ ನೀಡಿದ್ದು ಸಖತ್​ ವೈರಲ್​ ಆಗುತ್ತಿದೆ.

ಈ ಕುರಿತು ಮಾತನಾಡಿರುವ ಪಿಸಿಬಿ ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್, ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಗಳಲ್ಲಿ ಒಂದಾಗಿದ್ದು, ಬಹಳಷ್ಟು ಪ್ರಭಾವವನ್ನು ಹೊಂದಿದೆ. ಒಂದು ವೇಳೆ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಇವರ ಮಾರ್ಗವನ್ನೇ ಅನುಸರಿಸುತ್ತವೆ. ನನ್ನ ಪ್ರಕಾರ ಭಾರತ ತಂಡ ಪಾಕಿಸ್ತಾನದಲ್ಲಿ ಆಡಲು ಒಪ್ಪುವುದು ಬಹಳ ಕಡಿಮೆ. ಒಂದು ವೇಳೆ ಭಾರತ ಚಾಂಪಿಯನ್ಸ್​ ಟ್ರೋಫಿ ಆಡದಿದ್ದರೆ ವೆಚ್ಚ ಬೆಳೆಯುತ್ತದೆ ಮತ್ತು ಲಾಭ ಕುಸಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕ್ರೀಡೆಯನ್ನು ರಾಜಕೀಯದಲ್ಲಿ ಬೆರೆಸಬಾರದು ಎಂದು ನಾನು ಪಿಸಿಬಿಗೆ ಮನವಿ ಮಾಡುತ್ತೇನೆ. ವಿಷಯವು ಯಾವ ಮಟ್ಟದಲ್ಲಿ ಇದೇ ಎಂದರೆ ಬೇರೆ ಕ್ರಿಕೆಟ್​ ಮಂಡಳಿಗಳ ಮನವೊಲಿಸಬಹುದು ಆದರೆ, ಬಿಸಿಸಿಐ ಮನವೊಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ಭಾರತವು ಐಸಿಸಿಯಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದು, ಪಾಕಿಸ್ತಾನ ಟಿಟ್ ಫಾರ್ ಟಾಟ್ ತಂತ್ರವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದಲ್ಲ. ಬಿಸಿಸಿಐ ತನ್ನ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಮತ್ತು ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಿದಾಗ ಪಾಕಿಸ್ತಾನ ಚಾಂಪಿಯನ್ಸ್​ ಟ್ರೋಪಿಗೆ ಆತಿಥ್ಯ ವಹಿಸಿ ಏನು ಪ್ರಯೋಜನವಿರುವುದಿಲ್ಲ ಎಂದು ಪಿಸಿಬಿ ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ ಹೇಳಿದ್ದಾರೆ.