ಕ್ರೀಡೆ

VIDEO: ಆಮೀರ್ ಸೊಹೈಲ್ ವಿಕೆಟ್ ಕೀಳುವವರೆಗೂ ರಕ್ತ ಕುದಿಯುತ್ತಿತ್ತು ಎಂದ ವೆಂಕಟೇಶ್ ಪ್ರಸಾದ್

ಬೆಂಗಳೂರು: 1996ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಕ್ವಾರ್ಟರ್​ ಫೈನಲ್ ಪಂದ್ಯ ಯಾರಿಗೆ ನೆನಪಿಲ್ಲ ಹೇಳಿ. 24 ವರ್ಷ ಕಳೆದರೂ ಭಾರತೀಯ ಕ್ರೀಡಾಪ್ರಿಯರ ಮನದಲ್ಲಿ ಇನ್ನು ಹಸಿರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯ ದಾಖಲಿಸಿದ್ದು ಇತಿಹಾಸ. ಆದರೆ, ಕನ್ನಡಿಗ ವೆಂಕಟೇಶ್ ಪ್ರಸಾದ್ ಹಾಗೂ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಆಮೀರ್ ಸೊಹೈಲ್ ನಡುವಿನ ಕದನ ಮಾತ್ರ ಯಾರು ಮರೆತಿಲ್ಲ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದಿಗೂ ಹೈವೋಲ್ಟೆಜ್‌ನಿಂದ ಕೂಡಿರುತ್ತದೆ. 1996 ಏಕದಿನ ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನದ ಪಂದ್ಯ ಕೇಂದ್ರ ಬಿಂದುವಾಗಿದ್ದವರೂ ವೆಂಕಟೇಶ್ ಪ್ರಸಾದ್. ಭಾರತ ನೀಡಿದ 288 ರನ್ ಪ್ರತಿಯಾಗಿ ಪಾಕಿಸ್ತಾನ ಬಿರುಸಿನ ಆರಂಭ ಪಡೆಯಿತು. ಪಾಕ್ ಆರಂಭಿಕ ಆಮೀರ್ ಸೊಹೈಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತಕ್ಕೆ ತಲೆನೋವಾಗಿದ್ದರು. ವೆಂಕಟೇಶ್ ಪ್ರಸಾದ್ ಎಸೆತದಲ್ಲಿ ಬೌಂಡರಿ ಸಿಡಿಸಿದ ಸೊಹೈಲ್, ಬ್ಯಾಟ್‌ನಿಂದ ಚೆಂಡನ್ನು ಅವರಿಗೆ ತೋರಿಸಿ, ದರ್ಪ ಮೆರೆದಿದ್ದರು. ಆದರೆ, ಮರು ಎಸೆತದಲ್ಲಿಯೇ ವೆಂಕಟೇಶ್ ಪ್ರಸಾದ್ ಸೊಹೈಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಂಡಿದ್ದರು.

ರಕ್ತ ಕುದಿಯುತ್ತಿದ್ದು ಎಂದ ಪ್ರಸಾದ್

ಈ ಘಟನೆ ಮೆಲುಕು ಹಾಕಿರುವ ಪ್ರಸಾದ್, ಮೈದಾನದಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಸಾಮಾನ್ಯ. ಆದರೆ, ಆಮೀರ್ ಸೊಹೈಲ್ ಮಾಡಿದ ಸನ್ನೆ ನಿಜಕ್ಕೂ ಸರಿಯಾಗಿರಲಿಲ್ಲ. ಇಡೀ ದೇಶವೇ ಪಂದ್ಯವನ್ನು ನೋಡುತ್ತಿತ್ತು. ಈ ವೇಳೆ ಸೊಹೈಲ್ ವಿಕೆಟ್ ಬೇಕೆಂದು ನನ್ನ ರಕ್ತ ಕುದಿಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಹಗ್ಗಜಗ್ಗಾಟವನ್ನು ಯೂಟೂಬ್‌ನಲ್ಲಿ ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ನಾನಂತು ಸಾಕಷ್ಟು ಕೋಪಗೊಂಡಿದ್ದೆ, ಆಮೀರ್ ಸೊಹೈಲ್ ಔಟಾದ ತಕ್ಷಣವೇ ಶ್ರೀನಾಥ್, ಸಚಿನ್, ಅಜರ್ ಎಲ್ಲರೂ ನನ್ನ ಬಳಿ ಬಂದು ಸಮಾಧಾನ ಹೇಳಿದರು. ಜತೆಗೆ ಎಲ್ಲರೂ ರಕ್ಷಣೆಗೂ ನಿಂತರು. ಇಲ್ಲವಾದರೆ ನನಗೆ ದಂಡ ಅಥವಾ ನಿಷೇಧದ ಶಿಕ್ಷೆ ಬೀಳುತ್ತಿತ್ತು ಎಂದು ಸ್ಮರಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನವಜೋತ್ ಸಿಂಗ್ ಸಿಧು (93ರನ್, 115 ಎಸೆತ, 11 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್ ಹಾಗೂ ಅಜಯ್ ಜಡೇಜಾ (45 ರನ್, 25 ಎಸೆತ, 4 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 287 ರನ್ ಪೇರಿಸಿದರೆ, ಪ್ರತಿಯಾಗಿ ಪಾಕಿಸ್ತಾನ ಆಮೀರ್ ಸೊಹೈಲ್ (55 ರನ್, 46 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಸಯ್ಯದ್ ಅನ್ವರ್ (48ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿ ಬಿರುಸಿನ ಆರಂಭದ ನಡುವೆಯೂ ಕನ್ನಡಿಗರಾದ ವೆಂಕಟೇಶ್ ಪ್ರಸಾದ್ (45ಕ್ಕೆ 3) ಹಾಗೂ ಅನಿಲ್ ಕುಂಬ್ಳೆ (48ಕ್ಕೆ 3) ಜೋಡಿ ಮಾರಕ ದಾಳಿಗೆ ನಲುಗಿ 9 ವಿಕೆಟ್‌ಗೆ 248 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 39 ರನ್‌ಗಳಿಂದ ಜಯ ದಾಖಲಿಸಿ ಸೆಮಿಫೈನಲ್‌ಗೇರಿತು. ಕೋಲ್ಕತದಲ್ಲಿ ನಡೆದ ಸೆಮೀಸ್‌ನಲ್ಲಿ ಶ್ರೀಲಂಕಾ ಎದುರು ಭಾರತ ಸೋಲನುಭವಿಸಿತು.