ಕ್ರೀಡೆ

ಟೀಂ ಇಂಡಿಯಾ ಸೋಲಿಸುವುದೇ ನಮ್ಮ ಗುರಿ! ಸ್ಟಾರ್​ ಆಟಗಾರನ ಹೇಳಿಕೆಗೆ ಕ್ರಿಕೆಟ್​​ ಫ್ಯಾನ್ಸ್​ ಗರಂ

ಅಮೆರಿಕಾ: ಜೂನ್ 01ರಿಂದ ಅಧಿಕೃತ ಚಾಲನೆ ಪಡೆದುಕೊಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಇದೀಗ ಸಖತ್ ರೋಚಕವಾಗಿ ಸಾಗುತ್ತಿದ್ದು, ಪ್ರತಿ ಪಂದ್ಯವು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿರುವ ಭಾರತ 2 ಪಂದ್ಯಗಳಲ್ಲಿಯೂ ಜಯ ಸಾಧಿಸಿ, ಗ್ರೂಪ್​ 'ಎ' ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದೆ.

ಇನ್ನು ಇದೇ ಗುಂಪಿನಲ್ಲಿರುವ ಯುಎಸ್​ಎ ತಂಡ ಕೂಡ ಕಳೆದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಮುಂಚೂಣಿಯಲ್ಲಿದೆ. ಪ್ರತಿ ಆಟಗಾರರು ತಮ್ಮ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವುದೇ ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.

ಸದ್ಯ ಇದೇ ಖುಷಿಯಲ್ಲಿರುವ ಯುಎಸ್​ಎ ತಂಡಕ್ಕೆ ಇಂದು (ಜೂ.12) ಟೀಂ ಇಂಡಿಯಾ ಎದುರಾಳಿ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಯುನೈಟೆಡ್​ ಸ್ಟೇಟ್ಸ್​ ಆಟಗಾರ ಕೊಟ್ಟ ಹೇಳಿಕೆ ಮಾತ್ರ ಇದೀಗ ಕ್ರಿಕೆಟ್ ಫ್ಯಾನ್ಸ್​ ಗಮನಸೆಳೆಯುತ್ತಿದೆ.

"ನಾವು ಈ ಟೂರ್ನಿಯಲ್ಲಿ ಮುಂದೆ ಹೋದಷ್ಟು ನಮಗೇ ಉತ್ತಮ. ಗೆಲುವಿನ ಮೂಲಕ ನಮ್ಮ ಅಭಿಮಾನಿಗಳನ್ನು ಖುಷಿಪಡಿಸಬೇಕಿದೆ. ಟೀಂ ಇಂಡಿಯಾವನ್ನು ಮಣಿಸುವುದೇ ಸದ್ಯ ನಮಗೆ ದೊಡ್ಡ ಗುರಿಯಾಗಿದೆ. ನಮ್ಮ ತಂಡದಲ್ಲಿಯೂ ಸಹ ಕೆಲವರು ಭಾರತದ ಯುವ ಆಟಗಾರರಿದ್ದಾರೆ. ಹಾಗಾಗಿ ಎರಡು ಟೀಮ್​ಗೂ ಹೆಚ್ಚಿನ ಬೆಂಬಲ ಸಿಗಲಿದೆ" ಎಂದು ಯುಎಸ್​ಎ ತಂಡದ ಸ್ಟಾರ್​ ಕ್ರಿಕೆಟಿಗ ಆ್ಯರನ್​ ಜೋನ್ಸ್​ ಹೇಳಿದ್ದಾರೆ,(ಏಜೆನ್ಸೀಸ್).