ಗುಜರಾತ್: ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಟೀಕೆಗಳ ನಡುವೆ ದೇವರ ಮೊರೆ ಹೋಗಿದ್ದಾರೆ.
ಇಂದು (ಶುಕ್ರವಾರ) ಗುಜರಾತ್‌ನ ಪ್ರಭಾಸ್ ಪಟಾನ್‌ನಲ್ಲಿರುವ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಹಾರ್ದಿಕ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾರ್ದಿಕ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋವನ್ನು ಸೋಮನಾಥ ದೇವಾಲಯದ ಟ್ರಸ್ಟ್ ಹಂಚಿಕೊಂಡಿದೆ. ಸದ್ಯ ಅದರ ವಿಡಿಯೋ ವೈರಲ್ ಆಗುತ್ತಿದೆ.
IPL 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಪಂದ್ಯ ಆರಂಭಿಸಿದ ಹಾರ್ದಿಕ್, ಬ್ಯಾಕ್ ಟು ಬ್ಯಾಕ್ ಸೋಲು ಜೊತೆಗೆ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಹಾರ್ದಿಕ್ ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಅನೇಕ ಫೋಟೋಗಳು ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿ ಹಾರ್ದಿಕ್ ನೇತೃತ್ವದ ಮುಂಬೈ ಇಂಡಿಯನ್ಸ್ ಪಡೆ ಅತ್ಯಂತ ಕಳಪೆ ಆಟ ಆಡಿದೆ. ಈವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ದು ಅಂಕ ಪಟ್ಟಿಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಏಪ್ರಿಲ್ 1 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವನ್ನಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲು ಬಳಿಕ ಅನುಭವಿಸಿತ್ತು.
ಮುಂಬೈ ನಾಯಕನಾದ ನಂತರ, ಪಾಂಡ್ಯ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಯಿತು. ಇದರೊಂದಿಗೆ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಮುಂಬೈನ ಮುಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಇದೆ. ಈ ಪಂದ್ಯ ಏಪ್ರಿಲ್ 7 ರಂದು ನಡೆಯಲಿದೆ.
ಈ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಪಾಂಡ್ಯ ಸೋಮನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಜೊತೆಗೆ ಶಿವನಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ. ಪಾಂಡ್ಯ ಮತ್ತು ದೇವಾಲಯದ ಸಂಕೀರ್ಣದ ವಿಡಿಯೋ ಕೂಡ ಹೊರಬಿದ್ದಿದ್ದು ಎಲ್ಲಡೆ ಸಾಕಷ್ಟು ವೈರಲ್ ಆಗುತ್ತಿದೆ.