ಕ್ರೀಡೆ

ತ್ರಿಪುರದಲ್ಲಿ ಯುವ ಕ್ರಿಕೆಟ್ ಆಟಗಾರ್ತಿ ನಿಧನ

ಕೋಲ್ಕತ: ತ್ರಿಪುರ 19 ವಯೋಮಿತಿ ಕ್ರಿಕೆಟ್ ತಂಡದ ಆಟಗಾರ್ತಿ ಅಯಾಂತಿ ರಿಯಾಗ್ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. 16 ವರ್ಷದ ಅಯಾಂತಿ, ಕೊಠಡಿ ಫ್ಯಾನ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸಾವಿಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ನಾಲ್ಕು ಮಕ್ಕಳ ಪೈಕಿ ಅಯಾಂತಿ ಕೊನೆಯವರಾಗಿದ್ದು, ಕಳೆದ ಒಂದು ವರ್ಷದಿಂದ ತ್ರಿಪುರ 19 ವಯೋಮಿತಿ ತಂಡದ ಭಾಗವಾಗಿದ್ದರು, ಜತೆಗೆ 23 ವಯೋಮಿತಿ ತಂಡದ ಪರ ಏಕೈಕ ಟಿ20 ಪಂದ್ಯವಾಡಿದ್ದಾರೆ. ತ್ರಿಪುರ ಕ್ರಿಕೆಟ್ ಸಂಸ್ಥೆ (ಟಿಸಿಎ) ಅಯಾಂತಿ ನಿಧನಕ್ಕೆ ಸಂತಾಪ ಸೂಚಿಸಿದೆ. ತ್ರಿಪುರ ರಾಜಧಾನಿ ಅಗರ್ತಲಾದಿಂದ 90 ಕಿಲೋಮೀಟರ್ ದೂರದಲ್ಲಿರುವ ಉದಯಪುರ ಉಪ-ವಿಭಾಗದ ತೈನಾನಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪ್ರತಿಭಾನ್ವಿತ ಆಟಗಾರ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಸಂಸ್ಥೆ ಹೇಳಿದೆ. ಮಾನಸಿಕ ಖಿನ್ನತೆಗೂ ಒಳಗಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್‌ಗೂ ಮುಂಚೆ ಯಾವುದೇ ಸಮಸ್ಯೆ ಇರಲ್ಲಿಲ್ಲ. ಲಾಕ್‌ಡೌನ್ ವೇಳೆ ಆನ್‌ಲೈನ್ ತರಗತಿಗಳಲ್ಲಿ ಭಾಗಿಯಾಗುತ್ತಿದ್ದರು, ಆದರೆ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ನಮಗೆ ಅರಿವಿಲ್ಲ ಎಂದು ಟಿಸಿಎ ಕಾರ್ಯದರ್ಶಿ ತಿಮಿರ್ ಚಂಡ ತಿಳಿಸಿದ್ದಾರೆ.