ನವದೆಹಲಿ: ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ 2024ನೇ ಸಾಲಿನ ಐಪಿಎಲ್ ಹರಾಜಿಗೂ ಮುನ್ನ ಎಲ್ಲ 10 ಫ್ರಾಂಚೈಸಿಗಳು ರಿಟೇನ್ ಮತ್ತು ರಿಲೀಸ್ ಮಾಡಿದ ಆಟಗಾರರನ್ನು ಇಂದು ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿತ್ತು. ಗುಜರಾತ್ ಟೈಟಾನ್ಸ್ ಬಿಟ್ಟು ಮುಂಬೈಗೆ ಮರಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಲ್ಲೂ ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ.
ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯರನ್ನು ರಿಟೇನ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಮತ್ತು ಟೀಮ್ ಇಂಡಿಯಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಇದರ ಮೇಲಿನ ಜನರ ಗಮನವನ್ನು ಬೇರೆಡೆ ತಿರುಗಿಸಲು ಹಾರ್ದಿಕ್ ಪಾಂಡ್ಯರ ಕುರಿತು ಊಹಾಪೋಹಗಳನ್ನು ಹರಿಬಿಡಲಾಗಿದೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ಊಹಾಪೋಹಗಳ ಹಿಂದೆ ರೋಹಿತ್ ಶರ್ಮ, ಪತ್ನಿ ರಿತಿಕಾ ಮತ್ತು ಬಿಸಿಸಿಐ ಕೈವಾಡ ಇದೆ ಎನ್ನುವ ಅರ್ಥದಲ್ಲಿ ನೆಟ್ಟಿಗರು ಆರೋಪಗಳ ಸುರಿಮಳೆಗೈದಿದ್ದಾರೆ.
ಎಲ್ಲ ವರದಿಗಾರರು ಮತ್ತು ಪಿಆರ್ ಏಜೆನ್ಸಿಗಳು ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ವಿಯಾಗಿದ್ದೀರಿ. ನೀವೆಲ್ಲರೂ ವಿಶ್ವಕಪ್‌ನಿಂದ ಐಪಿಎಲ್ ವಹಿವಾಟಿನತ್ತ ನಮ್ಮ ಗಮನವನ್ನು ಎಷ್ಟು ಸುಲಭವಾಗಿ ಬದಲಾಯಿಸಿದ್ದೀರಿ. ಇದು ನಿಜಕ್ಕೂ ಚೆನ್ನಾಗಿದೆ ಮತ್ತು ಹೇಳಲು ಕರುಣಾಜನಕವಾಗಿದೆ. ಹಾರ್ದಿಕ್ ಹೋಗುತ್ತಾರೆ ಎಂದು ಎಲ್ಲರು ಭಾವಿಸಿದ್ದೇವು, ಆದರೆ ಅವರು ಉಳಿದುಕೊಂಡಿದ್ದಾರೆ ಎಂದು ನೆಟ್ಟಿಗರೊಬ್ಬರು ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
ವಿಶ್ವಕಪ್ ಸೋತ ಬಳಿಕ ರೋಹಿತ್ ಶರ್ಮ ಅವರ ಪಿಆರ್ ತಂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಇದೀಗ ಎಲ್ಲರ ಕಣ್ಣು ಐಪಿಎಲ್ ಮೇಲಿದ್ದು, ವಿಶ್ವಕಪ್ ಸೋಲನ್ನು ಬಹುಬೇಗನೆ ಮರೆತಿದ್ದಾರೆ. ಇದೀಗ ಯಾರೋಬ್ಬರು ವಿಶ್ವಕಪ್ ಸೋಲನ್ನು ಪ್ರಶ್ನಿಸುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.
ಮೊದಲು ಹಾರ್ದಿಕ್ ಪಾಂಡ್ಯ ಕುರಿತು ಊಹಾಪೋಹಗಳನ್ನು ಮಾಡಲಾಯಿತು. ಇದಾದ ಬಳಿಕ ರೋಹಿತ್ ಅವರ ಮುಂಬೈ ಇಂಡಿಯನ್ಸ್ ನಾಯಕತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸಲಾಯಿತು. ಈ ಮೂಲಕ ವಿಶ್ವಕಪ್ ಸೋಲಿನ ಗಮನವನ್ನು ಸುಲಭವಾಗಿ ಬೇರೆಡೆಗೆ ತಿರುಗಿಸಿದ್ದಾರೆ. ನಾವು ಪಿರಿತಿಕಾ (PRitika)ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬ ನೆಟ್ಟಿಗ ರೋಹಿತ್ ಶರ್ಮ ಪತ್ನಿಯನ್ನು ಎಳೆದುತಂದಿದ್ದಾರೆ. PRitika ಅಂದರೆ, ರೋಹಿತ್ ಪತ್ನಿ ರಿತಿಕಾ ಅವರ ಪಿಆರ್ ತಂಡ ಎಂಬರ್ಥದಲ್ಲಿ ನೆಟ್ಟಿಗರು ಹೇಳಿದ್ದಾರೆ.
ವಿಶ್ವಕಪ್ ಸೋಲು ಮತ್ತು ರೋಹಿತ್ ಶರ್ಮ ಕಳಪೆ ನಾಯಕತ್ವದ ಮೇಲಿನ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹಾರ್ದಿಕ್ ಪಾಂಡ್ಯ ವರ್ಗಾವಣೆ ನಾಟಕವನ್ನು ಬಿಸಿಸಿಐ ಚೆನ್ನಾಗಿ ಎಣೆದಿದೆ. ಇಡೀ ಡ್ರಾಮಾದಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಇದೀಗ ಬಹುತೇಕ ಮಂದಿ ವಿಶ್ವಕಪ್ ಮರೆತಿದ್ದಾರೆ. ಇದೀಗ ಎಲ್ಲರ ಕಣ್ಣು ಐಪಿಎಲ್ ಮೇಲಿದೆ ಎಂದು ಸಾಕಷ್ಟು ನೆಟ್ಟಿಗರು ಬಿಸಿಸಿಐ, ರೋಹಿತ್ ಶರ್ಮ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ವಿಶ್ವಕಪ್ ಸೋಲು ನ. 19ರಂದು ಗುಜರಾತಿನ ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್ 120 ಎಸೆತ 15 ಬೌಂಡರಿ, 4ಸಿಕ್ಸರ್) , ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಆಸೀಸ್ ಪಡೆ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಜಯಿಸಿ ಕ್ರಿಕೆಟ್ ಜಗತ್ತಿನ ಅಧಿಪತಿ ಎನಿಸಿಕೊಂಡಿದೆ. (ಏಜೆನ್ಸೀಸ್)