ಕ್ರೀಡೆ

ಟಿ20 ವಿಶ್ವಕಪ್ 2024ರ ಬೆಸ್ಟ್​ ಟೀಮ್​ ಇವರೇ: ಮಾಜಿ ಕ್ರಿಕೆಟಿಗನ ಲಿಸ್ಟ್​ನಲ್ಲಿ ಭಾರತದ ಹೆಸರು ಇಲ್ವೇ ಇಲ್ಲ! ​

ನವದೆಹಲಿ: ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ಅತಿಥ್ಯವನ್ನು ವೆಸ್ಟ್​ ಇಂಡೀಸ್ ಮತ್ತು ಅಮೆರಿಕಾ ವಹಿಸಿಕೊಂಡಿದ್ದು, ಪಂದ್ಯಾವಳಿಗಳಿಗೆ ಜೂ.01ರಿಂದಲೇ ಅಧಿಕೃತ ಚಾಲನೆ ದೊರೆತಿದೆ. ಈ ಪೈಕಿ ಗ್ರೂಪ್​ 'ಎ' ವಿಭಾಗದಲ್ಲಿ ಭಾರತ, ಯುಎಸ್​ಎ ತಂಡಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳನ್ನು ಅಲಂಕರಿಸಿದರೆ, ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿರುವ ಗ್ರೂಪ್​ 'ಡಿ'ನಲ್ಲಿರುವ ದಕ್ಷಿಣ ಆಫ್ರಿಕಾ ಕೂಡ ಭರ್ಜರಿ ಪೈಪೋಟಿ ಕೊಟ್ಟು, ಮೂರು ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ.

ಇನ್ನು ಇಂದು (ಜೂ.12) ನ್ಯೂಯಾರ್ಕ್​ನ ನಾಸ್ಸಾ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಯುಎಸ್​​ಎ ತಂಡಗಳು ಮುಖಾಮುಖಿಯಾಗಲಿದ್ದು, ಭಾರೀ ಅಂತರದಲ್ಲಿ ಗೆಲುವು ಸಾಧಿಸಲು ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಪ್ರಸ್ತುತ ಎರಡು ಪಂದ್ಯಗಳನ್ನು (ಐರ್ಲೆಂಡ್ ಮತ್ತು ಪಾಕಿಸ್ತಾನ) ಆಡಿರುವ ಟೀಂ ಇಂಡಿಯಾ, ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿ, ತಮ್ಮದು ಬಲಿಷ್ಠ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನು ಟೂರ್ನಿ ಆರಂಭಗೊಂಡ ಮೊದಲ ದಿನದಿಂದಲೂ ಎಲ್ಲಾ ತಂಡಗಳ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗು ಸಿಧು, "ನ್ಯೂಯಾರ್ಕ್‌ನಲ್ಲಿ ಪ್ರದರ್ಶನ ಅನ್ನೋ ವಿಚಾರ ಬಂದಾಗ ನಾನು ದಕ್ಷಿಣ ಆಫ್ರಿಕಾ ಟೀಮ್​ಗೆ ಅತ್ಯುತ್ತಮ ತಂಡ ಎಂಬ ಬಿರುದನ್ನು ನೀಡುತ್ತೇನೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌತ್​ ಆಫ್ರಿಕಾ ಅತ್ಯಂತ ಪ್ರಬಲ ತಂಡವಾಗಿದೆ" ಎಂದರು.

"ಆರಂಭಿಕ ಹಂತದಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶದ ವಿರುದ್ಧ ತೊಂದರೆಯಲ್ಲಿದ್ದರು. ಆದರೆ ಅದರಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ. ಅವರ ತಂಡದಲ್ಲಿ ಪಂದ್ಯ ಗೆಲ್ಲಿಸಿಕೊಡುವಂತ ಉತ್ತಮ ಬ್ಯಾಟರ್​ಗಳಿದ್ದಾರೆ. ಆಡಿರುವ ಅಷ್ಟು ಬ್ಯಾಟ್ಸ್​ಮನ್​ಗಳು ಪರಿಸ್ಥಿಗೆ ತಕ್ಕಂತೆ, ಆಟಕ್ಕೆ ಅನುಗುಣವಾಗಿಯೇ ಪ್ರದರ್ಶನ ತೋರಿದ್ದಾರೆ. ಪ್ರಸ್ತುತ ಡೇವಿಡ್​ ಮಿಲ್ಲರ್ ಮತ್ತು ಹೆನ್ರಿಕ್ ಕ್ಲಾಸೆನ್ ಅದ್ಭುತ ಫಾರ್ಮ್​ನಲ್ಲಿದ್ದಾರೆ" ಎಂದು ಹೆಸರಿಸಿದರು.

ಸದ್ಯ ನವಜೋತ್ ಸಿಂಗು ಸಿಧು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಅಭಿಮಾನಿಗಳು, 'ನಿಮ್ಮ ಕಣ್ಣಿಗೆ ಟೀಂ ಇಂಡಿಯಾ ಕೊಟ್ಟ ಅದ್ಭುತ ಪ್ರದರ್ಶನ ಕಾಣಿಸಲಿಲ್ಲವೇ? ಭಾರತ ತಂಡದ ಆಟಗಾರರ ಪರ್ಫಾಮೆನ್ಸ್ ಲೆಕ್ಕಕ್ಕೆ ಬರಲಿಲ್ಲವೇ? ನಿಮ್ಮ ಲಿಸ್ಟ್​ನಲ್ಲಿ ನಮ್ಮವರು ಯಾಕಿಲ್ಲ' ಎಂದು ವ್ಯಾಪಕವಾಗಿ ಕಮೆಂಟ್ ಮಾಡುವ ಮೂಲಕ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).