Vaibhav Suryavanshi: ಏಪ್ರಿಲ್ 28ರಂದು ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. 14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (101 ರನ್, 38 ಎಸೆತ, 7 ಬೌಂಡರಿ, 11 ಸಿಕ್ಸರ್) ಅವರ ಸ್ಫೋಟಕ ಶತಕದ ನೆರವಿನಿಂದ ರಾಜಸ್ಥಾನ ತಂಡ ಜಿಟಿ ಪಡೆಯನ್ನು 8 ವಿಕೆಟ್‌ಗಳಿಂದ ಮಣಿಸಿತು. ಈ ಪಂದ್ಯದ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ ಹೆಸರನ್ನು ಕೆತ್ತಿದ ವೈಭವ್ಗೆ ಕ್ರಿಕೆಟ್ ಪ್ರಿಯರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆ ಹರಿದುಬಂದಿವೆ.
ಇದನ್ನೂ ಓದಿ: Shivaraj Tangadagi | ದೇಶಭಕ್ತಿ ಬಗ್ಗೆ , ಯುದ್ದ ಮಾಡೋದರ ಬಗ್ಗೆ ಬಿಜೆಪಿಗರನ್ನು ಕೇಳುವ ಅವಶ್ಯಕತೆ ನಮಗಿಲ್ಲ
ಹರಾಜಿನಲ್ಲಿ 1.10 ಕೋಟಿ ರೂ. ಕೊಟ್ಟು ವೈಭವ್ರನ್ನು ತಮ್ಮ ಫ್ರಾಂಚೈಸಿಗೆ ಕರೆದುಕೊಂಡ ರಾಜಸ್ಥಾನ ರಾಯಲ್ಸ್, ಅವರ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಪ್ರತಿಭೆ ಕಂಡು ಭಾರೀ ಹೆಮ್ಮೆಪಟ್ಟಿದೆ. ಅಪ್ಪನ ಪ್ರೋತ್ಸಾಹದಿಂದ ತನ್ನ ಕನಸ್ಸನ್ನು ಒಂದೊಂದೇ ಮೆಟ್ಟಿಲು ಹತ್ತುತ ಈಡೇರಿಸಿಕೊಂಡ ವೈಭವ್, ಆರಂಭದಲ್ಲಿ ಅವಕಾಶ ಪಡೆಯಲು ತೀವ್ರ ಪರದಾಡಿದ್ದರು. ಆದರೆ, ಯುವ ಕ್ರಿಕೆಟಿಗನ ತಾಕತ್ತು, ಬ್ಯಾಟಿಂಗ್ ಸಾಮರ್ಥ್ಯವನ್ನು ಅಂದೇ ಸೂಕ್ಷ್ಮವಾಗಿ ಕಂಡಿದ್ದ ಟೀಮ್ ಇಂಡಿಯಾ ದಿಗ್ಗಜ ವಿವಿಎಸ್ ಲಕ್ಷ್ಮಣ್, ಸೂರ್ಯವಂಶಿ ಕ್ರಿಕೆಟ್ ಯಶಸ್ಸಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ.
ಬಿಸಿಸಿಐನ U-19 ಏಕದಿನ ಪಂದ್ಯದ ಸಂದರ್ಭದಲ್ಲಿ ಲಕ್ಷ್ಮಣ್ ಯುವ ಕ್ರಿಕೆಟಿಗನನ್ನು ಮೊದಲ ಬಾರಿಗೆ ಮುಖಾಮುಖಿಯಾಗಿ ಭೇಟಿಯಾದರು. ಬಿಹಾರದಲ್ಲಿ ನಡೆದ ಅಂತರ ಜಿಲ್ಲಾ ಸೀನಿಯರ್ ಪಂದ್ಯದಲ್ಲಿ ಸೂರ್ಯವಂಶಿ ನೀಡಿದ ಅದ್ಭುತ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಇದು ಅವರನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೆಪಿಸಿತು. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ U-19 ಸರಣಿಯಲ್ಲಿ ವೈಭರ್ರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ ಲಕ್ಷ್ಮಣ್, ಭಾರತ B ತಂಡದ ಪಂದ್ಯವೊಂದರಲ್ಲಿ 36 ರನ್‌ಗಳ ಸಾಧಾರಣ ಸ್ಕೋರ್‌ಗೆ ಔಟಾದ ವೈಭವ್ ಕಣ್ಣೀರಿಟ್ಟಿದ್ದನ್ನು ಗಮನಿಸಿ, ವೈಭವ್ಗೆ ಸಮಾಧಾನ ಹೇಳಿದ್ದರು.
"ಒಂದು ಪಂದ್ಯದಲ್ಲಿ ವೈಭವ್ ಕೇವಲ 36 ರನ್ ಗಳಿಸಿ ರನೌಟ್ ಆದರು. ಆಗ ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಬಂದ ವೈಭವ್, ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಇದನ್ನು ಗಮನಿಸಿದ ಲಕ್ಷ್ಮಣ್ ಅವರು, ವೈಭವ್ ಪಕ್ಕ ಕುಳಿತು ಸಮಾಧಾನ ಹೇಳಿದರು. ನಂತರ, 'ನಾವು ಇಲ್ಲಿ ರನ್‌ಗಳನ್ನು ಮಾತ್ರ ನೋಡುವುದಿಲ್ಲ. ದೀರ್ಘಾವಧಿಯವರೆಗೆ ಆಡುವ ಕೌಶಲ್ಯ ಹೊಂದಿರುವ ಆಟಗಾರರನ್ನೂ ಗಮನಿಸುತ್ತೇವೆ' ಎಂದು ಧೈರ್ಯ ತುಂಬಿದರು. ಈ ಸಮಯದಲ್ಲಿ ವೈಭವ್ ಸಾಮರ್ಥ್ಯವನ್ನು ಕಂಡಿದ್ದ ಬಿಸಿಸಿಐ ಕೂಡ ಅವನನ್ನು ಬೆಂಬಲಿಸಿತು" ಎಂದು ವೈಭವ್ ಕೋಚ್ ಮನೋಜ್ ಓಜಾ ತಿಳಿಸಿದ್ದಾರೆ.
ಇಷ್ಟಕ್ಕೆ ನಿಲ್ಲದ ಲಕ್ಷ್ಮಣ್ ಅವರ ಸಹಾಯಹಸ್ತ, ವೈಭವ್ ಅವರನ್ನು ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಪರಿಚಯಿಸಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಅಧ್ಯಕ್ಷರಾಗಿ ಲಕ್ಷ್ಮಣ್ ಕಳೆದ ಎರಡು ವರ್ಷಗಳಿಂದ ವೈಭವ್ ಸೂರ್ಯವಂಶಿ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈ ಆಧಾರದ ಮೇರೆಗೆ ಅವರು ದ್ರಾವಿಡ್ ಅವರಿಗೆ ವೈಭವ್ಗೆ ಒಂದು ಅವಕಾಶ ಕೊಡುವಂತೆ ಶಿಫಾರಸು ಮಾಡಿದ್ದರು ಎಂದು ವರದಿಯಾಗಿದೆ,(ಏಜೆನ್ಸೀಸ್).