ಕ್ರೀಡೆ

ಆರ್​ಸಿಬಿಗೆ ಕೇರಳ ತವರು... ದೇವರ ನಾಡಿನ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಖುಷಿ ಸುದ್ದಿ! RCB

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಚೊಚ್ಚಲ ಬಾರಿಗೆ ಐಪಿಎಲ್​ ಕಪ್​ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು ಕಹಿ ನೆನಪಾಗಿಯೇ ನಮ್ಮ ನಡುವೆ ಉಳಿದಿದೆ. ಈ ಒಂದು ಕಾರಣಕ್ಕೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

ಈ ಒಂದು ನಿರ್ಧಾರದಿಂದ ಆರ್​ಸಿಬಿ ತಂಡಕ್ಕೆ ಈ ಬಾರಿ ತವರು ಮೈದಾನ ಇಲ್ಲದಂತಾಗುತ್ತದೆ. ಕೆಲವು ಮೂಲಗಳ ಪ್ರಕಾರ ಮಹಾರಾಷ್ಟ್ರದ ಪುಣೆ ಮೈದಾನ ಆರ್​ಸಿಬಿ ತವರು ಮೈದಾನವಾಗಲಿದೆ ಎನ್ನಲಾಗುತ್ತಿದೆ. ಇದೀಗ ಕೇಳಿಬರುತ್ತಿರುವ ಮತ್ತೊಂದು ಮಾಹಿತಿ ಪ್ರಕಾರ, ಕೇರಳವು ಕೂಡ ಆರ್​ಸಿಬಿಗೆ ತವರು ಮೈದಾನ ಆಗಲಿದೆಯಂತೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಕಾಲ್ತುಳಿತದ ಘಟನೆಯ ನಂತರ, ಬೆಂಗಳೂರು ಕ್ರೀಡಾಂಗಣದಲ್ಲಿ ಇನ್ನು ಮುಂದೆ ಯಾವುದೇ ಪಂದ್ಯಗಳನ್ನು ನಡೆಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿಯೇ, ಭಾರತವು ಮಹಿಳಾ ಏಕದಿನ ವಿಶ್ವಕಪ್ ಅನ್ನು ಆಯೋಜಿಸಿದಾಗ, ಬೆಂಗಳೂರು ಕ್ರೀಡಾಂಗಣವನ್ನು ಪರಿಗಣಿಸಲಿಲ್ಲ. ಇನ್ನು ಬೆಂಗಳೂರಿನಿಂದ ಹೊರಗೆ ಹೊಸ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ​ ಹಾಕಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿನ ನಿಷೇಧವು ಮುಂಬರುವ ಐಪಿಎಲ್ ಸೀಸನ್​ಗೂ ಮುಂದುವರಿಯುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ, ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಬೇರೆ ನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚನೆ ಮಾಡುತ್ತಿದೆ. ಪ್ರಸ್ತುತ, ಆರ್‌ಸಿಬಿ ಆಡಳಿತ ಮಂಡಳಿಯು ಮೂರು ಕ್ರೀಡಾಂಗಣಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಮಹಾರಾಷ್ಟ್ರದ ಪುಣೆ, ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಕ್ರೀಡಾಂಗಣ (ಸ್ಪೋರ್ಟ್ಸ್ ಹಬ್) ಆರ್‌ಸಿಬಿ ತನ್ನ ತವರು ಮೈದಾನವಾಗಿ ಪರಿಗಣಿಸುತ್ತಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಈಗಾಗಲೇ ಆರ್‌ಸಿಬಿಯನ್ನು ಸ್ವಾಗತಿಸಲು ಮುಂದೆ ಬಂದಿದೆ. ಇದಕ್ಕೂ ಮೊದಲು, ಪುಣೆಯಲ್ಲಿ ಎರಡು ಐಪಿಎಲ್ ತಂಡಗಳು ಆಡಿದ್ದವು. ಪುಣೆ ವಾರಿಯರ್ಸ್ ಇಂಡಿಯಾ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪುಣೆಯಲ್ಲಿ ಐಪಿಎಲ್‌ನಲ್ಲಿ ಭಾಗವಹಿಸಿದ್ದ ತಂಡಗಳಾಗಿವೆ. ಮಹಾರಾಷ್ಟ್ರವು ಆರ್‌ಸಿಬಿ ಜೊತೆ ಮಾತುಕತೆ ನಡೆಸಲು ಸಜ್ಜಾಗಿದೆ.

ಇನ್ನು ಕೇರಳಕ್ಕೆ ಸಂಬಂಧಿಸಿದಂತೆ, ಆರ್‌ಸಿಬಿ ಬೆಂಗಳೂರಿನ ಸಮೀಪ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿರುವ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಪರಿಗಣಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)