ಕ್ರೀಡೆ

ಧೋನಿ, ಜಡೇಜಾ, ಪತಿರಾನ.. CSK ಪ್ಲೇಆಫ್ ಕನಸು ಛಿದ್ರಗೊಳ್ಳಲು ಈ ಮೂವರೇ ಕಾರಣ! ಮಾಜಿ ಕ್ರಿಕೆಟಿಗ ಕಿಡಿನುಡಿ

CSK: ನಿನ್ನೆ (ಏ.30) ಚೆಪಾಕ್​​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುಂಡಿದ ಧೋನಿ ಪಡೆ, ಗೆಲುವಿನ ಲಯಕ್ಕೆ ಮರಳಲು ತೀರ ಹೆಣಗಾಡುತ್ತಿದೆ. ಪಂಜಾಬ್ ಎದುರಿಗೆ ಹೀನಾಯ ಸೋಲು ಅನುಭವಿಸುವ ಮೂಲಕ ಇದೀಗ 18ನೇ ಆವೃತ್ತಿಯಿಂದ ಚೆನ್ನೈ ಅಧಿಕೃತವಾಗಿ ಹೊರಬಿದ್ದಿದೆ. ಈ ಸುದ್ದಿ ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಅಪಾರ ಸಂಖ್ಯೆಯ ಕ್ರಿಕೆಟ್ ಬಳಗವನ್ನು ಅಚ್ಚರಿಗೆ ದೂಡಿದೆ.

ಸ್ಯಾಮ್ ಕರನ್ ಹೊರತುಪಡಿಸಿದರೆ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು. ಇದು ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. 200 ರನ್ ಗಡಿದಾಟಿಸುವ ಅವಕಾಶ ಹೊಂದಿದ್ದ ಸಿಎಸ್​ಕೆ, ಕರನ್ ಔಟ್ ಆಗಿದ್ದೇ ತಡ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಎನ್ನುವಂತೆ ಚಹಲ್​ ಸ್ಪಿನ್​ ದಾಳಿಗೆ ತತ್ತರಿಸಿ, ಪೆವಿಲಿಯನ್ ಹಾದಿ ಹಿಡಿದರು. ಇಷ್ಟಕ್ಕೆ ನಿಲ್ಲದ ಕಳಪೆ ಫಾರ್ಮ್​, ಬೌಲಿಂಗ್​ನಲ್ಲಿಯೂ ಇದೇ ತಪ್ಪನ್ನು ಮಾಡಿದರು. ಪಂಜಾಬ್ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿಯೂ ಎಡವಿದರು.

4 ವಿಕೆಟ್​ಗಳ ಅಂತರದಲ್ಲಿ ಮತ್ತೊಂದು ಸತತ ಹೀನಾಯ ಸೋಲಿಗೆ ಗುರಿಯಾದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಇದೀಗ ಅಧಿಕೃತವಾಗಿ ಐಪಿಎಲ್​ 18ನೇ ಆವೃತ್ತಿಯಿಂದ ಹೊರಬಿದ್ದ ಸಂಗತಿ ತಿಳಿದು ಟೀಮ್ ಇಂಡಿಯಾದ ಮಾಜಿ ವೇಗಿ ಆರ್​.ಪಿ ಸಿಂಗ್ ಬೇಸರ ಹೊರಹಾಕಿದರು. "ಹಲವಾರು ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ರವೀಂದ್ರ ಜಡೇಜಾ ಕೈಯಿಂದಲೂ ಆಗಲಿಲ್ಲ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ತಂಡವನ್ನು ಧೋನಿ ಮುನ್ನಡೆಸಿದ್ದೇ ಆದರೂ ಗೆಲುವಿನ ಲಯಕ್ಕೆ ಮರಳಲಿಲ್ಲ. ಈ ಸೀಸನ್​ನಲ್ಲಿ ಅತಿ ಹೆಚ್ಚು ವೈಡ್​ ಬಾಲ್​ ಹಾಕಿರುವುದು ಪತಿರಾನ ಮತ್ತು ವಿಕೆಟ್​ ಕಬಳಿಸದೆ ಇದ್ದದ್ದು ಅವರೇ" ಎಂದು ಸಿಂಗ್ ದೂಷಿಸಿದರು.

"ಈ ಸಾಲಿನಲ್ಲಿ ಶಿವಂ ದುಬೆ ಕೂಡ ಸೇರುತ್ತಾರೆ. ಅವರಿಂದಲೂ ಉತ್ತಮ ಪ್ರದರ್ಶನ ಬಂದಿಲ್ಲ. ಸ್ಪಿನ್​ ಬೌಲರ್​ಗಳಿಂದ ದಾಳಿ ಇಲ್ಲ. ಬ್ಯಾಟರ್​ಗಳಿಂದ ಹೆಚ್ಚುವರಿ ರನ್​ಗಳ ಕೊಡುಗೆ ಸಹ ಇಲ್ಲ. ಪ್ಲೇಆಫ್ ರೇಸ್​ನಿಂದ ಸಿಎಸ್​ಕೆ ಹೊರಬೀಳಲು ಜಡೇಜಾ, ಧೋನಿ ಮತ್ತು ಪತಿರಾನ ನೇರ ಹೊಣೆ" ಎಂದು ಆರ್​.ಪಿ. ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).