ಯುಎಸ್ಎ: ಜೂನ್ 01ರಂದು ಬಾಂಗ್ಲದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 60ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಚುಟುಕು ವಿಶ್ವ ಸಮರದಲ್ಲಿ ಭರ್ಜರಿ ಪ್ರದರ್ಶನ ನೀಡವುದಾಗಿ ಟೀಮ್ ಇಂಡಿಯಾ ಎದುರಾಳಿ ತಂಡಗಳಿಗೆ ಸಂದೇಶ ರವಾನಿಸಿದೆ. 2013ರ ನಂತರ ಟೀಮ್ ಇಂಡಿಯಾ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಭಾರತದ ಪಾಲಿಗೆ ಐಸಿಸಿ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ. ಈ ಬಾರಿಯಾದರೂ ಕಪ್ ಗೆಲ್ಲುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದು, ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಜೂನ್ 05) ಪಂದ್ಯ ನಡೆಯಲಿದೆ. ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ.
ಬಲಿಷ್ಠ ಭಾರತಕ್ಕೆ ಸವಾಲೊಡ್ಡಲು ಐರ್ಲೆಂಡ್ ಕೂಡ ಹವಣಿಸುತ್ತಿದೆ. ತಂಡದ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದ್ದು, ಪಂದ್ಯ ಕುತೂಹಲಕರವಾಗಿರುವುದು ಖಚಿತ. ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿರುತ್ತಾರೆ ಎಂಬ ಕುತೂಹಲವಿದೆ. ಇದರ ನಡುವೆಯೇ ಐರ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಗ್ಯಾರಿ ವಿಲ್ಸನ್ ಟೀಮ್ ಇಂಡಿಯಾವನ್ನು ಎದುರಿಸಲು ತಮ್ಮ ತಂಡ ರೂಪಿಸಿರುವ ಯೋಜನೆಗಳ ಕುರಿತು ಮಾತನಾಡಿದ್ದಾರೆ.
ಟೀಮ್ ಇಂಡಿಯಾ ಬಗ್ಗೆ ನಮಗೆ ಸಾಕಷ್ಟು ತಿಳಿದಿದೆ. ಅವರ ಬಗ್ಗೆ ಸಾಕಷ್ಟು ಡೇಟಾ ನಮ್ಮ ಬಳಿ ಇದೆ. ಅವರು ವಿಶ್ವದಾದ್ಯಂತ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾದಲ್ಲಿರುವ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು, ನಮ್ಮ ಬಳಿಯೂ ಉತ್ತಮ ಆಟಗಾರರಿದ್ದಾರೆ. ನಮ್ಮ ಟೀಮ್ ಇಂಡಿಯಾ ಆಟಗಾರರ ಸಾಕಷ್ಟು ಡೇಟಾ ಇದ್ದು, ಪ್ರತಿ ಆಟಗಾರನಿಗೂ ಒಂದೊಂದು ಯೋಜನೆ ರೂಪಿಸಲಾಗಿದೆ.
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೂ ಒಂದೇ ಒಂದು ಪಂದ್ಯ ನಡೆದಿದ್ದು, ಈಗಲೇ ವಿಶ್ಲೇಷಿಸುವುದು ಕಷ್ಟವಾಗಿದೆ. ಟೀಮ್ ಇಂಡಿಯಾ ವಿರುದ್ಧ ಆಡಬೇಕಾದರೆ ಆತ್ಮವಿಶ್ವಾಸ ಅತಿಮುಖ್ಯ ಪಾತ್ರ ವಹಿಸುತ್ತದೆ. ನಾವು ಯಾವುದೇ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬಹುದು ಎಂದು ನಮಗೆ ತಿಳಿದಿದೆ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ, ನಾವು ಉತ್ತಮ ಫಾರ್ಮ್ನೊಂದಿಗೆ ಕಣಕ್ಕಿಳಿಯುತ್ತೇವೆ ಎಂದು ಐರ್ಲೆಂಡ್ ಬ್ಯಾಟಿಂಗ್ ಕೋಚ್ ಗ್ಯಾರಿ ವಿಲ್ಸನ್ ಟೀಮ್ ಇಂಡಿಯಾವನ್ನು ಎದುರಿಸಲು ತಮ್ಮ ತಂಡ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.