ಕ್ರೀಡೆ

ಸ್ವಪ್ನಿಲ್​​ ಸಿಂಗ್​ ಆರ್​ಸಿಬಿ ಪಾಲಿಗೆ ಅದೃಷ್ಟವಂತ ಅನ್ನೋದಕ್ಕೆ ಈ ಘಟನೆಗಿಂತ ಉತ್ತಮ ಸಾಕ್ಷಿ ಮತ್ತೊಂದಿಲ್ಲ!

ಬೆಂಗಳೂರು: ನಿನ್ನೆ (ಮೇ 18) ಚೆನ್ನೈ ಸೂಪರ್​ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ನಡೆದ ಪ್ಲೇಆಫ್​ ನಿರ್ಧರಿಸುವ ನಿರ್ಣಾಯಕ ಪಂದ್ಯದಲ್ಲಿ ಅಗತ್ಯ ರನ್​ಗಳ ಅಂತರದಿಂದ ಗೆದ್ದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಪ್ಲೇಆಫ್​ ಪ್ರವೇಶ ಮಾಡಿದೆ. ಈ ಟೂರ್ನಿಯ ಮೊದಲಾರ್ಧದಲ್ಲಿ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು ಆರ್​ಸಿಬಿ ಅಂಕಪಟ್ಟಿಯಲ್ಲಿ ಕೆಳಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಫಾಫ್​ ಡುಪ್ಲೆಸಿಸ್​ ಪಡೆ ಪ್ಲೇಆಫ್​ ಪ್ರವೇಶ ಮಾಡಿದೆ. ಕೆಲವೊಮ್ಮೆ ಅದೃಷ್ಟ ಕೈಹಿಡಿಯುತ್ತದೆ ಅಂತಾರಲ್ಲ ಅದು ಆರ್​ಸಿಬಿ ವಿಚಾರದಲ್ಲಿ ನಿಜವಾಗಿದೆ.

ಹೌದು, ಒಳ್ಳೆಯದಾದಾಗ ಕೆಲವೊಮ್ಮೆ ಕೆಲವರ ಕಾಲ್ಗುಣ ಎಂದು ಹೇಳುತ್ತೇವೆ. ಅದೇ ರೀತಿ ಆ ಒಬ್ಬ ಆಟಗಾರನ ಆಗಮನದಿಂದಾಗಿ ಆರ್​ಸಿಬಿಗೆ ಒಂದರ ಹಿಂದಂತೆ 6 ಯಶಸ್ಸುಗಳು ಲಭಿಸಿವೆ. ಆರ್​​ಸಿಬಿ ತಂಡಕ್ಕೆ ಆತನ ಜತೆಯಲ್ಲಿ ಅದೃಷ್ಟವೂ ಬಂದಿದೆ. ಅಷ್ಟಕ್ಕೂ ನಾವು ಹೇಳುತ್ತಿರುವ ಆರ್​ಸಿಬಿ ಪಾಲಿನ ಆ ಅದೃಷ್ಟವಂತ ಬೇರೆ ಯಾರೂ ಅಲ್ಲ, ಅವರೇ ಸ್ವಪ್ನಿಲ್​ ಸಿಂಗ್​.

33 ವರ್ಷದ ಕ್ರಿಕೆಟಿಗ ಏಪ್ರಿಲ್ 25ರಂದು ಹೈದರಾಬಾದ್‌ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್​ಸಿಬಿ ತಂಡಕ್ಕೆ ಪಾದರ್ಪಣೆ ಮಾಡಿದರು. 2008ರಿಂದ ಐಪಿಎಲ್‌ನಲ್ಲಿದ್ದರೂ, ಆರ್‌ಸಿಬಿ ಈ ದೇಶೀಯ ಹೀರೋಗೆ ಆಡಲು ಇದೇ ಮೊದಲ ಬಾರಿಗೆ ಅವಕಾಶ ನೀಡಿತು. ಎಸ್​ಆರ್​ಎಚ್​ ವಿರುದ್ಧದ ಪಂದ್ಯದೊಂದಿಗೆ ಸ್ವಪ್ನಿಲ್​ ಸಿಂಗ್​ ಅವರು ಆಟದ ಮೈದಾನವನ್ನು ಪ್ರವೇಶಿಸಿದರು. ಅಂದಿನಿಂದ ಆರ್​ಸಿಬಿ ಪಾಲಿಗೆ ಅದೃಷ್ಟವೋ ಅದೃಷ್ಟ.

ಆರ್​ಸಿಬಿ ಪರ ಆಡಿದ ಮೊದಲ ಪಂದ್ಯದಲ್ಲೇ ಕೊನೆಯ ಓವರ್‌ನಲ್ಲಿ ಕೇವಲ 6 ಎಸೆತಗಳಲ್ಲಿ ಒಂದು ಸಿಕ್ಸರ್​ ಮತ್ತು ಒಂದು ಬೌಂಡರಿಯೊಂದಿಗೆ ಸ್ವಪ್ನಿಲ್​ ಸಿಂಗ್​ 12 ರನ್ ಗಳಿಸಿದರು. ಬೌಲಿಂಗ್​ನಲ್ಲೂ ಕಮಾಲ್​ ಮಾಡಿದರು. ತನ್ನ ಮೊದಲ ಓವರ್‌ನಲ್ಲಿ 19 ರನ್ ನೀಡಿದರು ಸಹ ಎರಡನೇ ಓವರ್​ನಲ್ಲಿ ಈಡನ್ ಮಾರ್ಕ್ರಾಮ್ ಮತ್ತು ಅಪಾಯಕಾರಿ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಆರ್​ಸಿಬಿ ಕಡೆ ವಿಜಯಲಕ್ಷ್ಮೀಯನ್ನು ಒಲಿಸಿದರು. ಅಂದಿನಿಂದ ಆರ್​ಸಿಬಿ ಗೆಲುವಿನಲ್ಲಿ ಸ್ವಪ್ನಿಲ್​ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ.

ಡುಪ್ಲೆಸಿಸ್​ ಮೆಚ್ಚುಗೆ

ಆರ್​ಸಿಬಿ ನಾಯಕ ಫಾಫ್​ ಡುಪ್ಲೆಸಿಸ್​ ಕೂಡ ಇದೇ ಮಾತನನ್ನು ಈ ಹಿಂದೆಯೇ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಡುಪ್ಲೆಸಿಸ್​, ಟೂರ್ನಿಯ ಮೊದಲಾರ್ಧದಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ದಯನೀಯವಾಗಿ ವಿಫಲರಾದೆವು. ಆದರೆ ಒಬ್ಬ ಆಟಗಾರನ ಆಗಮನದಿಂದ ನಮ್ಮ ತಂಡದ ಪ್ರದರ್ಶನ ಸಂಪೂರ್ಣ ಬದಲಾಯಿತು. ಅವರೇ ಸ್ವಪ್ನಿಲ್ ಸಿಂಗ್. ಸ್ವಪ್ನಿಲ್ ಆಗಮನದಿಂದ ನಮ್ಮ ಬೌಲಿಂಗ್ ಶಕ್ತಿ ಹೆಚ್ಚಿದೆ. ಅವರ ಸ್ಪಿನ್ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ. ಸ್ವಪ್ನಿಲ್ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಡುಪ್ಲೆಸಿಸ್​ ಹೊಗಳಿದ್ದರು.

ಸ್ವಪ್ನಿಲ್​ ಸಿಂಗ್​ ಅದೃಷ್ಟವಂತ ಎಂಬುದು ಮತ್ತೊಮ್ಮೆ ಸಾಬೀತು

ಸ್ವಪ್ನಿಲ್​ ಸಿಂಗ್​ ಆರ್​ಸಿಬಿ ಪಾಲಿನ ಅದೃಷ್ಟವಂತ ಎಂಬುದು ನಿನ್ನೆ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕೊನೆಯ ಹಂತದಲ್ಲಿ ಮಹೇಂದ್ರ ಸಿಂಗ್​ ಧೋನಿ ಅವರು ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಪಾಳಯದಲ್ಲಿ ನಡುಕು ಹುಟ್ಟಿಸಿದರು. ಆರ್​ಸಿಬಿ ಪ್ಲೇಆಫ್​ಗೆ ಏರುವುದನ್ನು ತಪ್ಪಿಸಲು ಕೊನೆಯ ಒಂದು ಓವರ್​ನಲ್ಲಿ 17 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಕ್ರೀಸ್​ನಲ್ಲಿದ್ದರು. ಯಶ್​ ದಯಾಳ್​ ಎಸೆದ ಮೊದಲ ಎಸೆತದಲ್ಲಿ 110 ಮೀಟರ್​ ಉದ್ದದ ಟೂರ್ನಿಯ ಅತ್ಯಂತ ಉದ್ದದ ಸಿಕ್ಸರ್​ ಸಿಡಿಸುವ ಮೂಲಕ ಆರ್​ಸಿಬಿ ಪರ ಇದ್ದ ಪ್ಲೇಆಫ್​ ವಿಜಯಲಕ್ಷ್ಮೀಯನ್ನು ಚೆನ್ನೈ ಕಡೆ ತಿರುಗಿಸಿದರು. ಸಿಕ್ಸರ್​ ಬಳಿಕ 5 ಎಸೆತಗಳಲ್ಲಿ ಕೇವಲ 11 ರನ್​ ಬೇಕಿತ್ತು. ಇದರಿಂದ ಆರ್​ಸಿಬಿ ಮೇಲೆ ಹೆಚ್ಚಿನ ಒತ್ತಡವೂ ಇತ್ತು. ಆದರೆ, ದಯಾಳ್​ ಅವರ ಎರಡನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಈ ಚೆಂಡು ಕೂಡ ಸಿಕ್ಸರ್​ ಹೋಗುತ್ತದೆ ಅಂದುಕೊಂಡಿದ್ದರು. ಆದರೆ, ತುಂಬಾ ಎತ್ತರಕ್ಕೆ ಹೋಗಿದ್ದ ಚೆಂಡನ್ನು ಬೌಂಡರಿ ಗೆರೆಯಲ್ಲಿ ನಿಂತಿದ್ದ ಆರ್​ಸಿಬಿ ಪಾಲಿನ ಅದೃಷ್ಟವಂತ ಸ್ವಪ್ನಿಲ್​ ಸಿಂಗ್​ ತುಂಬಾ ಸುಲಭವಾಗಿ ಹಿಡಿದರು. ಇದಕ್ಕೂ ಮುನ್ನ ಅನುಭವಿ ಸಿರಾಜ್​, ಶಿವಂ ದುಬೆಗೆ ಜೀವದಾನ ನೀಡಿದ್ದನ್ನು ಮರೆಯುವ ಹಾಗಿಲ್ಲ. ಅದರಲ್ಲೂ ಅಪಾಯಕಾರಿ ಧೋನಿ ಅವರ ಕ್ಯಾಚ್​ ಹಿಡಿದಿದ್ದು ತಂಡದ ಗತಿಯನ್ನೇ ಬದಲಿಸಿತು. ಕೊನೆಯಲ್ಲಿ 4 ಎಸೆತಕ್ಕೆ 11 ರನ್​ ಬೇಕಿದ್ದಾಗ ಶಾರ್ದುಲ್​ ಠಾಕೂರ್​ ಕ್ರೀಸ್​ನಲ್ಲಿದ್ದರು. ಆದರೆ, ದಯಾಳ್​ 3ನೇ ಎಸೆತವನ್ನು ಡಾಟ್​ ಬಾಲ್​ ಮಾಡಿದರು. 4 ಎಸೆತದಲ್ಲಿ ಒಂದು ರನ್​ ನೀಡಿದರು. ಕೊನೆಯ 2 ಬಾಲ್​ನಲ್ಲಿ 10 ರನ್​ ಬೇಕಿದ್ದಾಗ ಅಪಾಯಕಾರಿ ಜಡೇಜಾ ಕ್ರೀಸ್​ನಲ್ಲಿದ್ದರು. ಆದರೆ, 5ನೇ ಎಸೆತವನ್ನು ದಯಾಳ್​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪಾಳಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕೊನೆಯ ಎಸೆತವನ್ನು ದಯಾಳ್ ಮತ್ತೆ​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪ್ಲೇಆಫ್​ ಪ್ರವೇಶ ಖಚಿತವಾಯಿತು. ಇಲ್ಲಿ ಸ್ವಪ್ನಿಲ್​ ಸಿಂಗ್​ ಹಿಡಿದ ಮ್ಯಾಚ್​ ಟರ್ನಿಂಗ್​ ಕ್ಯಾಚ್​ ಅನ್ನು ಮರೆಯುವಂತಿಲ್ಲ. ಸ್ವಪ್ನಿಲ್​ ಸಿಂಗ್​ ಆರ್​ಸಿಬಿ ಪಾಲಿನ ಅದೃಷ್ಟವಂತ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದಿಲ್ಲ.

ಪಂದ್ಯದ ವಿಚಾರಕ್ಕೆ ಬಂದರೆ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್​ ಡುಪ್ಲೆಸಿಸ್ ಪಡೆ ನಿಗದಿತ 20 ಓವರ್​ಗಳನ್ನು ಆಡಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಲು ವಿಫಲವಾದ ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ರುತುರಾಜ್ ಪಡೆ ಲೀಗ್​ ಹಂತದಲ್ಲೇ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ. (ಏಜೆನ್ಸೀಸ್​)