ಬೆಂಗಳೂರು: ಕ್ರಿಕೆಟ್ ಆಟ ಈಗ ಶ್ರೀಮಂತವಾಗಿ ಬೆಳೆದಿದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಿಸಿಸಿಐ ಅಂದು ತೆಗೆದುಕೊಂಡ ಆ ಒಂದು ಖಡಕ್ ನಿರ್ಧಾರ. ಅದುವೇ ಭಾರತ ತಂಡದ ತವರಿನ ಪಂದ್ಯಗಳ ಪ್ರಸಾರ ಹಕ್ಕು ಮಾರಾಟ ಮಾಡುವುದು. ಅದರ ಫಲವಾಗಿ ಈಗ ಬಿಸಿಸಿಐ ಖಜಾನೆಗೆ ಸಾವಿರಾರು ಕೋಟಿ ಹಣದ ಪ್ರವಾಹ ಹರಿದು ಬರುತ್ತಿದೆ. ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಹಕ್ಕು ಮಾರಾಟದ ಮೌಲ್ಯವೇನೆಂದು ಬಿಸಿಸಿಐ ತಿಳಿದುಕೊಳ್ಳಲು, ದೂರದರ್ಶನ ಅಂದು ಇಟ್ಟ ಆ ಒಂದು ಬೇಡಿಕೆಯೇ ಮುಖ್ಯ ಕಾರಣವಾಗಿತ್ತು. ಇದರಿಂದ ಬಿಸಿಸಿಐಗೆ ತನ್ನೊಳಗಿನ ಶಕ್ತಿಯ ಅರಿವಾಯಿತು!
ಮೊದಲಿಗೆ ದೇಶದ ಏಕೈಕ ಪ್ರಸಾರ ವಾಹಿನಿಯಾಗಿದ್ದ ದೂರದರ್ಶನ ಉಚಿತವಾಗಿಯೇ ಭಾರತೀಯ ಕ್ರಿಕೆಟ್ ತಂಡದ ಪಂದ್ಯಗಳನ್ನು ಪ್ರಸಾರ ಮಾಡುತಿತ್ತು. ಆದರೆ, 1992ರಲ್ಲಿ ಭಾರತ ತಂಡದ ಕ್ರಿಕೆಟ್ ಪಂದ್ಯವೊಂದನ್ನು ಪ್ರಸಾರ ಮಾಡಲು ದೂರದರ್ಶನ, 5 ಲಕ್ಷ ರೂ. ಮೊತ್ತವನ್ನು ಬಿಸಿಸಿಐ ಕೇಳಿತ್ತು. ಇದು ಪಂದ್ಯ ಪ್ರಸಾರದ ಖರ್ಚುವೆಚ್ಚಕ್ಕೆ ಬೇಕಾಗುತ್ತದೆ ಎಂದಿತ್ತು.
ಇದರ ಬೆನ್ನಲ್ಲೇ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕು ಮಾರಾಟಕ್ಕೆ ಮುಂದಾಗಿದ್ದ ಬಿಸಿಸಿಐ, 1993ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯ ಪಂದ್ಯಗಳ ಪ್ರಸಾರ ಹಕ್ಕನ್ನು ಟ್ರಾನ್ಸ್ ವರ್ಲ್ಡ್ ಇಂಟರ್ನ್ಯಾಷನಲ್ (ಟಿಡಬ್ಲ್ಯುಐ) ಕಂಪನಿಗೆ ಮಾರಿತ್ತು. ಇದರಿಂದಾಗಿ ದೂರದರ್ಶನ, ಟಿಡಬ್ಲ್ಯುಐಗೆ ಸುಮಾರು 3 ಕೋಟಿ ರೂ. ನೀಡಿ ಭಾರತದಲ್ಲಿ ಪಂದ್ಯ ಪ್ರಸಾರದ ಹಕ್ಕು ಪಡೆದುಕೊಂಡಿತು. ಈ ಮೊದಲ ಪ್ರಸಾರ ಹಕ್ಕು ಒಪ್ಪಂದದಿಂದ ಬಿಸಿಸಿಐಗೆ ಒಟ್ಟು 1.82 ಕೋಟಿ ರೂ. ಆದಾಯ ಬಂದಿತ್ತು. ತವರಿನ 1996ರ ವಿಶ್ವಕಪ್ ಯಶಸ್ಸಿನ ನಂತರದಲ್ಲಿ ಭಾರತದಲ್ಲಿ ಕ್ರಿಕೆಟ್ ಪ್ರಸಾರ ಹಕ್ಕು ಹೆಚ್ಚಿನ ಬೇಡಿಕೆ ಪಡೆಯಲಾರಂಭಿಸಿತು. 1999ರಲ್ಲಿ ಬಿಸಿಸಿಐ ದೂರದರ್ಶನದ ಜತೆ ಪ್ರತಿ ವರ್ಷಕ್ಕೆ 54 ಕೋಟಿ ರೂ.ನಂತೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ನಂತರದಲ್ಲಿ ಖಾಸಗಿ ಚಾನಲ್ಗಳಿಗೆ ಪ್ರಸಾರ ಹಕ್ಕು ಮಾರಾಟವಾಗತೊಡಗಿತು. ಇದೀಗ 2023-2028ರ ಸಾಲಿನ 5 ವರ್ಷಗಳ ಪ್ರಸಾರ ಹಕ್ಕು ಮಾರಾಟದಿಂದ ಬಿಸಿಸಿಐ ಬರೋಬ್ಬರಿ 5963 ಕೋಟಿ ರೂ. ಆದಾಯ ಗಳಿಸಿದೆ.