ನವದೆಹಲಿ: ಚುಟುಕು ವಿಶ್ವಸಮರ ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ವಿವಾದದ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು. ಕ್ರಿಕೆಟ್ ಶಿಶು ಯುಎಸ್ಎ ಹಾಗೂ ಭಾರತದ ವಿರುದ್ಧದ ಸೋಲಿನ ಬಳಿಕ ತೀವ್ರ ಅವಮಾನಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದೊಳಗೆ ವಿವಾದಗಳ ಸರಣಿ ಶುರುವಾಗಿದೆ. ಮೊದಲು ತಂಡದ ಪ್ರದರ್ಶನದ ಕುರಿತು ಕಿಡಿಕಾರಿದ್ದ ಮಾಜಿ ಕ್ರಿಕೆಟಿಗರು ಆ ಬಳಿಕ ಆಟಗಾರರ ನಡುವಿನ ಒಗ್ಗಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದರ ಬೆನ್ನಲ್ಲೇ ಕೋಚ್ ಗ್ಯಾರಿ ಕರ್ಸ್ಟನ್ ಆಟಗಾರರ ನಡುವಿನ ಭಿನ್ನಭಿಪ್ರಾಯದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ನಾಯಕ ಬಾಬರ್ ಅಜಂ ತಲೆದಂಡದ ಬಗ್ಗೆ ಹಲವರು ಧ್ವನಿ ಎತ್ತಿದ್ದರು.
ಇದೀಗ ಬಾಬರ್ ಅಜಂ ನಾಯಕತ್ವದ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಬಾಬರ್ ಅಜಂ ನಾಯಕತ್ವದ ಕುರಿತು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೆ ನಿನ್ನನ್ನು ನಾಯಕನನ್ನಾಗಿ ನೇಮಿಸಿದವರಿಗೆ ಐನ್ಸ್ಟೈನ್ ಮೆದುಳಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಪರ ಲಾಬಿ; ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಶೋಯೆಬ್, ಮೊಲಿಗೆ ಬಾಬರ್ ಅಜಂನನ್ನು ನಾಯಕನನ್ನಾಗಿ ನೇಮಿಸಿದ ಆ ಐನ್ಸ್ಟೈನ್ ಯಾರೆಂದು ನನಗೆ ತಿಳಿಯಬೇಕು. ನನಗೆ ಆತನನ್ನು ನೋಡುವ ಆಸೆಯಾಗಿದೆ. ಆತ ನಾಯಕತ್ವಕ್ಕೆ ಅರ್ಹ ವ್ಯಕ್ತಿನಾ ಅಥವಾ ಕ್ಯಾಪ್ಟನ್ಸಿ ಗುಣಗಳನ್ನು ಹೊಂದಿದ್ದಾನೆಯೇ ಎಂದು ಅರಿಯದೆ ಆತನನ್ನು ನಾಯಕನನ್ನಾಗಿ ನೇಮಿಸಲಾಗಿದೆ. ನನ್ನ ಪ್ರಕಾರ ಬಾಬರ್ ನಾಯಕತ್ವಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಬಾಬರ್ನನ್ನು ನಾಯಕತ್ವದಿಂದ ಕಳೆಗಿಳಿಸಿದರೆ ಆತನಿಗೆ ಕ್ರಮೇಣವಾಗಿ ತಂಡದಿಂದ ಗೇಟ್ಪಾಸ್ ಕೊಡಲಾಗುತ್ತದೆ. ಮೊದಲು ಒಬ್ಬ ಆಟಗಾರನಾಗಿ ತಂಡಕ್ಕೆ ಹೇಗೆ ಉಪಕಾರಿಯಾಗಬೇಕೆಂಬುದನ್ನು ತಿಳಿದುಕೊಂಡು ಆಡಲು ಶುರು ಮಾಡು ಎಂದು ಹೇಳಿದ್ದಾರೆ. ಇತ್ತ ಶೋಯೆಬ್ ಅಖ್ತರ್ ಐನ್ಸ್ಟೈನ್ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಬಾಬರ್ ಹೆಸರನ್ನು ನಾಯಕತ್ವಕ್ಕೆ ಶಿಫಾರಸ್ಸು ಮಾಡಿದ್ದಾಗಿ ಇಮ್ರಾನ್ ಖಾನ್ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು.