ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ನಿನ್ನೆ (ಅ.30) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸುವ ಮೂಲಕ ಭಾರತದ ಮಹಿಳಾ ಪಡೆ ಇತಿಹಾಸ ಸೃಷ್ಟಿಸಿತು. ಮತ್ತೊಂದೆಡೆ ಲೀಗ್ ಹಂತದಲ್ಲಿ ಭಾರತವನ್ನು ಸೋಲಿಸಿ ಬೀಗುತ್ತಿದ್ದ ಆಸ್ಟ್ರೇಲಿಯಾ ಮಹತ್ವದ ಸಮೀಸ್ನಲ್ಲಿ ಸೋತು ಮುಖಭಂಗ ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಆಸಿಸ್ ನಾಯಕಿ ಅಲಿಸಾ ಹೀಲಿ ( Alyssa Healy ), ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯಗಳಿಂದಾಗಿ ನಾವು ಪಂದ್ಯವನ್ನು ಕಳೆದುಕೊಂಡೆವು ಎಂದು ಹೇಳಿದರು.
ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೆಮಿಫೈನಲ್ ತಲುಪಿದ್ದ ಆಸ್ಟ್ರೇಲಿಯಾ, ನಿರ್ಣಾಯಕ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಯಿತು. ಪಂದ್ಯದ ನಂತರ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅಲಿಸಾ ಹೀಲಿ, ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಗೆಲುವು ಕೂಡ ನಮ್ಮ ಕೈ ಜಾರಿತು ಎಂದರು.
ಇದು ಒಳ್ಳೆಯ ಪಂದ್ಯವಾಗಿತ್ತು. ಆದರೆ, ನಾವು ಗೆಲುವನ್ನು ಕಳೆದುಕೊಂಡೆವು. ನಾವು ಬ್ಯಾಟಿಂಗ್‌ನಲ್ಲಿ ಸರಿಯಾದ ನಿರ್ವಹಣೆ ತೋರಲು ಸಾಧ್ಯವಾಗಲಿಲ್ಲ. ಅಲ್ಲದೆ, ಬೌಲಿಂಗ್ ಕೂಡ ಚೆನ್ನಾಗಿರಲಿಲ್ಲ. ಇದು ಸಾಲದು ಎಂಬಂತೆ ನಾವು ಮೈದಾನದಲ್ಲಿ ಬಹುಮುಖ್ಯವಾದ ಕ್ಯಾಚ್‌ಗಳನ್ನು ಬಿಟ್ಟೆವು. ಈ ಕಾರಣಗಳಿಂದಾಗಿ ನಾವು ಸೋತೆವು. ಗೆಲ್ಲಲು 339 ರನ್‌ಗಳ ಬೃಹತ್ ಗುರಿ ಸಾಕು ಎಂದು ನಾವು ಭಾವಿಸಿದ್ದೆವು ಎಂದು ಅಲಿಸಾ ಹೀಲಿ ಹೇಳಿದರು.
ಅಂದಹಾಗೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ 34ನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತ್ತು. ಈ ಹಂತದಲ್ಲಿ ಅವರು ಸುಲಭವಾಗಿ 350ಕ್ಕೂ ಹೆಚ್ಚು ರನ್ ಗಳಿಸುತ್ತಾರೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದಾಗ್ಯೂ, ಭಾರತೀಯ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿ ತ್ವರಿತವಾಗಿ ವಿಕೆಟ್ ಪಡೆದರು ಮತ್ತು 49.5 ಓವರ್‌ಗಳಲ್ಲಿ 338 ರನ್‌ಗಳಿಗೆ ಆಲೌಟ್ ಆದರು. ಇನ್ನು ಫೀಲ್ಡಿಂಗ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಬಿಟ್ಟು ಜೆಮಿಮಾ ರೊಡ್ರಿಗಸ್ ಅವರಿಗೆ ಜೀವದಾನ ನೀಡಿದರು. ಇದೇ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಜೆಮಿಮಾ 134 ಎಸೆತಗಳಲ್ಲಿ 127 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.
ಇನ್ನು ಈ ಪಂದ್ಯದಲ್ಲಿ 119 ರನ್ ಗಳಿಸಿದ ಫೋಬೆ ಲಿಚ್‌ಫೀಲ್ಡ್ ಅವರನ್ನು ಅಲಿಸ್ಸಾ ಶ್ಲಾಘಿಸಿದರು. ನಾಯಕಿಯಾಗಿ ಮುಂದಿನ ಪೀಳಿಗೆಯ ಆಟಗಾರ್ತಿಯರ ಪ್ರತಿಭೆಯನ್ನು ನೋಡುವುದು ಅದ್ಭುತವಾಗಿದೆ. ಲಿಚ್‌ಫೀಲ್ಡ್ ಅದ್ಭುತವಾಗಿ ಆಡಿದರು. ಅವರಿಗೆ ಅಭಿನಂದನೆಗಳು. ಮುಂದಿನ ವಿಶ್ವಕಪ್‌ವರೆಗೆ ಅವರು ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದರು.
ಈ ಪಂದ್ಯದಲ್ಲಿ ನಾವು ಭಾರತದ ಮೇಲೆ ಒತ್ತಡ ಹೇರಿ ಸಾಕಷ್ಟು ಅವಕಾಶಗಳನ್ನು ನಮ್ಮ ಪರವಾಗಿ ಸೃಷ್ಟಿಸಿದ್ದೆವು. ಆದರೆ, ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ನಾನು ಕೂಡ ಒಂದು ಕಾರಣ. ಈ ಸೋಲಿನಿಂದ ನಾವು ಪಾಠ ಕಲಿಯುತ್ತೇವೆ ಮತ್ತು ನಾವು ಬಲಿಷ್ಠವಾಗಿ ಹಿಂತಿರುಗುತ್ತೇವೆ. ಸೆಮಿಫೈನಲ್ ಪಂದ್ಯವು ನಾಕೌಟ್ ಮಾದರಿ ಪಂದ್ಯವಾಗಿದ್ದು, ನಾವು ಸರಿಯಾಗಿ ಆಡದಿದ್ದರೆ, ತಂಡ ಎಷ್ಟೇ ಉತ್ತಮವಾಗಿದ್ದರೂ, ಸೋಲ ಬೇಕಾಗುತ್ತದೆ. ಈ ಟೂರ್ನಮೆಂಟ್‌ನಿಂದ ನಿರ್ಗಮಿಸಿದರೂ, ನಮ್ಮ ಪ್ರದರ್ಶನದ ಬಗ್ಗೆ ನಮಗೆ ಹೆಮ್ಮೆ ಇದೆ. ನಾನು ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಹೇಳಿ ಅಲಿಸಾ ಹೀಲಿ ಮಾತು ಮುಗಿಸಿದರು. (ಏಜೆನ್ಸೀಸ್)