ಕ್ರೀಡೆ

ನನ್ನ ಗುರಿ ಒಂದೇ… ಟೀಮ್​ ಇಂಡಿಯಾ ಮುಖ್ಯ​ ಕೋಚ್​ ಆದ ಬೆನ್ನಲ್ಲೇ ಗೌತಿ ಮಾಡಿದ ಪೋಸ್ಟ್​ ವೈರಲ್​!

ನವದೆಹಲಿ: ಟೀಮ್​​ ಇಂಡಿಯಾದ ಮುಖ್ಯ ಕೋಚ್​ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಟಿ20 ವಿಶ್ವಕಪ್​ ಆರಂಭವಾದಾಗಿನಿಂದಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮಾಧ್ಯಮಗಳ ಕೂಡ ಈ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರಿಂದ ಹೊಸ ಕೋಚ್ ಯಾರಾಗುತ್ತಾರೆ ಎಂಬುದು ಕುತೂಹಲ ಸಹಜವಾಗಿ ಮೂಡಿತ್ತು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಕೂಡ ಆಸಕ್ತಿ ತೋರಿಸಿದ್ದರು. ಕೊನೆಗೂ ಈ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಮಂಡಳಿಯ ಕಾರ್ಯದರ್ಶಿ ಜಯ್​ ಷಾ ಅವರು ನಿನ್ನ ಅಧಿಕೃತ ಹೇಳಿಕೆ ನೀಡಿದ್ದಾರೆ.

ಕೋಚ್ ಆಗಿ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಪಡೆದ ಬೆನ್ನಲ್ಲೇ ಗಂಭೀರ್ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ದೇಶ ಸೇವೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎಂದಿದ್ದಾರೆ. ಟೀಮ್​ ಇಂಡಿಯಾಗೆ ಮರುಪ್ರವೇಶ ಮಾಡಲು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಭಾರತ ನನ್ನ ಗುರುತು. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದಕ್ಕಿಂತ ಉತ್ತಮವಾದದ್ದೇನೂ ಜೀವನದಲ್ಲಿ ಇಲ್ಲ. ಭಾರತ ತಂಡಕ್ಕೆ ಮರುಪ್ರವೇಶ ಮಾಡಿರುವುದು ನನಗೆ ಗೌರವವಾಗಿದೆ. ಟೀಮ್​ ಇಂಡಿಯಾ ಕ್ಯಾಪ್ ಧರಿಸಲು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಕೋಚ್ ಆಗಿ ನನ್ನ ಗುರಿ ಒಂದೇ. ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದು ನನ್ನ ಗುರಿಯಾಗಿದೆ. ಮೆನ್ ಇನ್ ಬ್ಲೂ 140 ಕೋಟಿ ಜನರ ಕನಸುಗಳನ್ನು ಹೊತ್ತಿದೆ. ಆ ಕನಸುಗಳನ್ನು ನನಸು ಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

ಗಂಭೀರ್ ಅವರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಲೆಜೆಂಡ್‌ಗೆ ಸ್ವಾಗತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆಟಗಾರನಾಗಿ ಹಲವು ಪುರಸ್ಕಾರ ಪಡೆದಿರುವ ಗಂಭೀರ್​, ಐಪಿಎಲ್​ನಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಮತ್ತು ಮೆಂಟರ್ ಆಗಿ ಯಶಸ್ವಿ ವೃತ್ತಿ ಜೀವನವನ್ನು ಹೊಂದಿದ್ದಾರೆ. ಇದೀಗ ಅವರ ಆಗಮನದಿಂದ ಟೀಮ್​ ಇಂಡಿಯಾಗೆ ಬಲ ಬಂದಿದೆ. ಗಂಭೀರ್ ಅವರ ಕೋಚಿಂಗ್‌ನಲ್ಲಿ ತಂಡವು ಹೆಚ್ಚಿನ ಐಸಿಸಿ ಟ್ರೋಫಿಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ.

ಗಂಭೀರ್​ ಅವರನ್ನು ಕೋಚ್ ಆಗಿ ಘೋಷಿಸುವಾಗ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ, ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಟೀಮ್​ ಇಂಡಿಯಾದ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಆಧುನಿಕ ಕ್ರಿಕೆಟ್‌ ಬಹಳ ವೇಗವಾಗಿ ಬದಲಾಗುತ್ತಿದ್ದು ಗೌತಮ್ ಅವರು ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂಬ ವಿಶ್ವಾಸ ನನಗಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಗೌತಮ್‌ ಗಂಭೀರ್‌ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜಯ್‌ ಷಾ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)