ಕ್ರೀಡೆ

ಪೊಲೀಸ್​​ ಯೂನಿಫಾರ್ಮ್​ ಧರಿಸಿ ಡಿಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡ ಸಿರಾಜ್! ಇನ್ಮುಂದೆ ಹುಷಾರ್​ ಎಂದ ನೆಟ್ಟಿಗರು​ | Mohammed Siraj

ಹೈದರಾಬಾದ್​: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್ ( Mohammed Siraj )​​ ಅವರು ತೆಲಂಗಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಪೊಲೀಸ್​ ಯೂನಿಫಾರ್ಮ್​ನಲ್ಲಿರುವ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿರಾಜ್​ ಅವರ ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಕೊನೆಗೂ ಸಿರಾಜ್​ ಅವರು ನಕಲಿ ಖಾತೆಗಳನ್ನು ತೆರೆದಿರುವವರನ್ನು ಬಂಧಿಸಲು ಬರುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಸಿರಾಜ್​ ಅವರು ಪೊಲೀಸ್​ ಡ್ರೆಸ್​ನಲ್ಲೇ ಕ್ರಿಕೆಟ್​ ಅಭ್ಯಾಸಕ್ಕೆ ಈ ರೀತಿ ಬರುತ್ತಾರೆ ಅಂತ ತೆಲುಗಿನ ಪೊಕಿರಿ ಸಿನಿಮಾದ ದೃಶ್ಯವೊಂದನ್ನು ಇನ್ನೊಬ್ಬ ನೆಟ್ಟಿಗ ಹರಿಬಿಟ್ಟಿದ್ದಾರೆ. ಸಿರಾಜ್​ ಅವರು ಇದೀಗ ಡಿಎಸ್​ಪಿ ಆಗಿದ್ದಾರೆ. ಅವರನ್ನು ಟ್ರೋಲ್​ ಮಾಡುವ ಮುನ್ನ ಯೋಚಿಸಿ ಎಂದು ಮತ್ತೊಬ್ಬ ನೆಟ್ಟಿಗ ಎಚ್ಚರಿಸಿದ್ದಾರೆ. ಹೀಗೆ ಸಾಕಷ್ಟು ಕಾಮೆಂಟ್​ಗಳು ಹರಿದುಬರುತ್ತಿವೆ.

ಕಳೆದ ಶುಕ್ರವಾರ (ಅ.11) ಡಿಜಿಪಿ ಕಚೇರಿಗೆ ತೆರಳಿದ ಸಿರಾಜ್​, ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಹಾಗೂ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸಿರಾಜ್ ಅವರೊಂದಿಗೆ ಸಂಸದರಾದ ಅನಿಲ್ ಕುಮಾರ್ ಯಾದವ್ ಮತ್ತು ಮೊಹಮ್ಮದ್ ಫಹೀಮುದ್ದೀನ್ ಕೂಡ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಅಂದಹಾಗೆ ಸಿರಾಜ್ ಅವರಿಗೆ ಗ್ರೂಪ್ 1 ಸರ್ಕಾರಿ ಸ್ಥಾನಮಾನ ನೀಡುವುದಾಗಿ ಈ ಹಿಂದೆಯೇ ತೆಲಂಗಾಣ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಸಿರಾಜ್ ಅವರನ್ನು ತೆಲಂಗಾಣದ ಡಿಎಸ್​ಪಿ ಆಗಿ ನೇಮಿಸಲಾಗಿದ್ದು, ಅವರ ಕ್ರಿಕೆಟ್ ಸಾಧನೆಗಳನ್ನು ಗೌರವಿಸಲಾಗಿದೆ. ಸಿರಾಜ್​ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರೆಸುತ್ತಾರೆ ಮತ್ತು ತಮ್ಮ ಹೊಸ ಪಾತ್ರದಲ್ಲಿ ಅನೇಕರನ್ನು ಪ್ರೇರೇಪಿಸುತ್ತಾರೆ ಎಂದು ಪೊಲೀಸರು ಎಕ್ಸ್ ಪೋಸ್ಟ್‌ನಲ್ಲಿ ಈ ಹಿಂದೆಯೇ ತಿಳಿಸಿದ್ದಾರೆ.

ಡಿಎಸ್​ಪಿಯಾಗಿ ನೇಮಕವಾಗಿರುವ ಸಿರಾಜ್​ ಅವರು ತಿಂಗಳಿಗೆ 1,37,050 ರೂ. ಸಂಬಳ ಪಡೆಯಲಿದ್ದಾರೆ. ಇದರ ಹೊರತಾಗಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿನ ಸಾಧನೆಯ ನಂತರ ತೆಲಂಗಾಣ ಸರ್ಕಾರವು ಸಿರಾಜ್​ ಅವರಿಗೆ ಜುಬಿಲಿ ಹಿಲ್ಸ್‌ನಲ್ಲಿ 600 ಚದರ ಅಡಿಯ ಭೂಮಿಯನ್ನು ಮಂಜೂರು ಮಾಡಿದೆ. ಅಂದಹಾಗೆ ಸಿರಾಜ್ ಟಿ20 ವಿಶ್ವಕಪ್ 2024 ವಿಜೇತ ತಂಡದ ಸದಸ್ಯರಾಗಿದ್ದರು. ಟೀಮ್​ ಇಂಡಿಯಾಗೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ಸಿರಾಜ್​ಗೆ 5 ಕೋಟಿ ರೂ. ಸಿಕ್ಕಿದೆ.

ಸಿರಾಜ್​ ಅವರು ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ವೇಗಿ ಕೂಡ ಹೌದು. ಆರ್​ಸಿಬಿ ಪರ ಆಡುವ ಅವರಿಗೆ ಒಂದು ಸೀಸನ್‌ಗೆ 7 ಕೋಟಿ ಸಂಭಾವನೆ ನೀಡಲಾಗುತ್ತದೆ. ಇನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯಲ್ಲಿದ್ದು, ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ.

ಇನ್ನು ಅಕ್ಟೋಬರ್ 16ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗಾಗಿ ಭಾರತದ 15 ಜನರ ತಂಡದಲ್ಲಿ ಸಿರಾಜ್ ಅವರನ್ನು ಕೂಡ ಹೆಸರಿಸಲಾಗಿದೆ. ಟೆಸ್ಟ್ ತಂಡದ ಉಪನಾಯಕರಾಗಿ ನೇಮಕಗೊಂಡ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಆಕಾಶ್ ದೀಪ್ ಮತ್ತು ಸಿರಾಜ್​ ವೇಗದ ಬೌಲರ್​ಗಳಾಗಿದ್ದಾರ. (ಏಜೆನ್ಸೀಸ್​)