ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಿದ್ದು, ಅತಿಥೇಯರು ಸರಣಿಯ ಅಂತಿಮ ಪಂದ್ಯದಲ್ಲೂ ಮೇಲುಗೈ ಸಾಧಿಸಿದ್ದಾರೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ಅಂತಿಮ ಪಂದ್ಯ ಮಹತ್ತರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಐದನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.
ಐದನೇ ಟೆಸ್ಟ್ ಹಾಗೂ ಸರಣಿಯ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಟಾಪ್ ಐದು ಬ್ಯಾಟ್ಸ್ಮನ್ಗಳು 50ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾದ ಟಾಪ್ ಐವರು ಬ್ಯಾಟ್ಸ್ಮನ್ಗಳು 50 ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆಯನ್ನು ಮೂರನೇ ಬಾರಿಗೆ ನಿರ್ಮಿಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ. 1998 ರಲ್ಲಿ ಕಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದ ಭಾರತ ಇನ್ನಿಂಗ್ಸ್ ಹಾಗೂ 219ರನ್ಗಳಿಂದ ಪಂದ್ಯವನ್ನು ಜಯಿಸಿತ್ತು. ಇದಾದ ಬಳಿಕ 2009ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲೂ ಭಾರತ ಈ ಸಾಧನೆ ಮಾಡಿತ್ತು.
15 ವರ್ಷಗಳ ಬಳಿಕ ಟೀಮ್ ಇಂಡಿಯಾ ಈ ಸಾಧನೆ ಮಾಡಿದ್ದು, ಈ ಬಾರಿ ಯಶಸ್ವಿ ಜೈಸ್ವಾಲ್ 57 ರನ್, ರೋಹಿತ್ ಶರ್ಮಾ 103, ಶುಭಮನ್ ಗಿಲ್ 110, ದೇವದತ್ ಪಡಿಕ್ಕಲ್ 65 ಮತ್ತು ಸರ್ಫರಾಜ್ ಖಾನ್ 56 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಟೀಮ್ ಇಂಡಿಯಾ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ.