ಸಿಡ್ನಿ: ನಿನ್ನೆ (ನ.2) ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನಕಲಿ ಕ್ಷೇತ್ರರಕ್ಷಣೆ ಮಾಡಿದ್ದಾರೆ ಎಂದು ಬಾಂಗ್ಲಾದೇಶ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ನರುಲ್ ಹಸನ್ ಗಂಭೀರ ಆರೋಪ ಮಾಡಿದ್ದಾರೆ.
ಕೊಹ್ಲಿ ನಕಲಿ ಕ್ಷೇತ್ರ ರಕ್ಷಣೆ ಮಾಡಿದ್ದನ್ನು ಅಂಪೈರ್ ಗಮನಿಸಲಿಲ್ಲ. ಇದರಿಂದ ನಮ್ಮ ತಂಡಕ್ಕೆ 5 ಪೆನಾಲ್ಟಿ ರನ್ ಸಿಗುವ ಸಾಧ್ಯತೆ ಇತ್ತು. ಆದರೆ, ಅಂಪೈರ್ಗಳು ಮಾಡಿದ ಎಡವಟ್ಟಿನಿಂದಾಗಿ ನಮ್ಮ ತಂಡಕ್ಕೆ ವಂಚನೆ ಆಗಿದೆ ಎಂದು ಅಪೈಂರ್ಗಳಾದ ಕ್ರಿಸ್ ಬ್ರೌನ್ ಮತ್ತು ಮರೈಸ್ ಎರಾಸ್ಮಸ್ ವಿರುದ್ಧ ಆರೋಪ ಮಾಡಿದ್ದಾರೆ.
ಮಳೆಯ ಕಾರಣದಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾ ತಂಡಕ್ಕೆ 16 ಓವರ್ಗಳಲ್ಲಿ 151 ರನ್ ಗುರಿ ನೀಡಲಾಗಿತ್ತು. ಆದರೆ, ಅಂತಿಮವಾಗಿ 5 ರನ್ ಅಂತರದಿಂದ ಬಾಂಗ್ಲಾ ತಂಡ ಸೋಲನ್ನು ಅನುಭವಿಸಿತು. ಅಂತಿಮ ಓವರ್ನಲ್ಲಿ ಅರ್ಷದೀಪ್ ಸಿಂಗ್ಗೆ ಒಂದು ಸಿಕ್ಸರ್ ಮತ್ತು ಬೌಂಡರಿ ಮೂಲಕ ಪಂದ್ಯವನ್ನು ಜೀವಂತವಾಗಿರಿಸಿದ್ದ ನರುಲ್, ಕೊನೆಯಲ್ಲಿ ಐದು ರನ್ಗಳ ಅಂತರದಿಂದ ಸೋತ ಬಳಿಕ ಅಂಪೈರ್ಗಳನ್ನು ದೂಷಿಸಿದರು.
ಮಳೆಯಿಂದಾಗಿ ಮೈದಾನ ತೇವವಾಗಿದ್ದರಿಂದ ಪಂದ್ಯದ ದಿಕ್ಕೇ ಬದಲಾಯಿತು. ಆದರೆ, ನಕಲಿ ಕ್ಷೇತ್ರ ರಕ್ಷಣೆಯಿಂದ ನಮಗೆ 5 ರನ್ ಸಿಗಬಹುದಿತ್ತು. ಆದರೆ, ಅದು ಕೂಡ ಸಿಗಲಿಲ್ಲ ಎಂದು ಅಂಪೈರ್ಗಳಿಬ್ಬರ ವಿರುದ್ಧ ನರುಲ್ ಅಸಮಾಧಾನ ಹೊರಹಾಕಿದ್ದಾರೆ.
ಅಂದಹಾಗೆ ನರುಲ್ 7ನೇ ಓವರ್ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಈ ಮಾತನ್ನು ಆಡಿದ್ದಾರೆ. ಬೌಂಡರಿ ಲೈನ್ನಲ್ಲಿದ್ದ ಅರ್ಷದೀಪ್ ಚೆಂಡನ್ನು ವಿಕೆಟ್ ಕೀಪರ್ ಬಳಿ ಎಸೆಯುತ್ತಾರೆ. ಈ ವೇಳೆ ಸ್ಲಿಪ್ ವಿಭಾಗದಲ್ಲಿ ನಿಂತಿದ್ದ ಕೊಹ್ಲಿ ಚೆಂಡನ್ನು ಹಿಡಿದಿರುವಂತೆ ಮತ್ತು ನಾನ್ ಸ್ಟ್ರೈಕರ್ ವಿಭಾಗಕ್ಕೆ ಎಸೆಯುತ್ತಿರುವಂತೆ ನಟಿಸುತ್ತಾರೆ. ಆದರೆ, ಚೆಂಡು ವಿಕೆಟ್ ಕೀಪರ್ ಕೈಯಲ್ಲಿ ಇರುತ್ತದೆ. ಆ ಕ್ಷಣದಲ್ಲಿ ಬ್ಯಾಟ್ಸ್ಮನ್ಗಳಾದ ಲಿಟನ್ ದಾಸ್ ಮತ್ತು ನಿಜ್ಮುಲ್ ಹೊಸೈನ್ ಕೊಹ್ಲಿಯನ್ನು ಗಮನಿಸುವುದೇ ಇಲ್ಲ.
ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಶೇರ್ ಮಾಡಿರುವ ನರುಲ್, ಅಂಪೈರ್ಗಳು ಇದ್ದನ್ನು ಗಮನಿಸಿದ್ದರೆ ನಮಗೆ 5 ರನ್ ಪೆನಾಲ್ಟಿ ಸಿಗುತ್ತಿತ್ತು ಎಂದಿದ್ದಾರೆ. ಇದು ನಕಲಿ ಕ್ಷೇತ್ರ ರಕ್ಷಣೆಯಾಗಿದ್ದು, ಅದನ್ನು ಗಮನಿಸಿದ ಅಂಪೈರ್ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಐಸಿಸಿ ಆಟದ ನಿಯಮ 41.5 ಅನ್ಯಾಯದ ಆಟಕ್ಕೆ ಸಂಬಂಧಿಸಿದೆ. ಫೀಲ್ಡಿಂಗ್ ತಂಡವು ಉದ್ದೇಶಪೂರ್ವಕವಾಗಿ ವಂಚನೆ ಅಥವಾ ಬ್ಯಾಟ್ಸ್ಮನ್ಗೆ ಅಡಚಣೆ ಉಂಟು ಮಾಡುವುದನ್ನು ಈ ನಿಯಮ ನಿಷೇಧಿಸುತ್ತದೆ. ಒಂದು ವೇಳೆ ಇದು ಅಂಪೈರ್ ಗಮನಕ್ಕೆ ಬಂದು ನಿಯಮ ಉಲ್ಲಂಘನೆ ಎಂದು ಗೊತ್ತಾದಲ್ಲಿ ಆ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಿ, ಐದು ಪೆನಾಲ್ಟಿ ರನ್ ಕೊಡಬಹುದು. ಆದರೆ, ಕೊಹ್ಲಿ ಪ್ರಕರಣದಲ್ಲಿ ಆ ರೀತಿ ನಡೆದಿಲ್ಲ. ಏಕೆಂದರೆ, ಕೊಹ್ಲಿ ಚೆಂಡನ್ನು ಎಸೆಯುವಂತೆ ನಟಿಸಿದಾಗ ಬ್ಯಾಟ್ಸ್ಮನ್ಗಳು ಕೊಹ್ಲಿಯನ್ನು ಗಮನಿಸಿಲ್ಲ ಮತ್ತು ಯಾವುದೇ ಅಡಚಣೆಗೆ ಒಳಗಾಗಿಯೇ ಇಲ್ಲ. ಹೀಗಾಗಿ ಆರೋಪಕ್ಕೆ ಬೆಲೆಯಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್)