Suryakumar Yadav : ಏಷ್ಯಾಕಪ್ ಟೂರ್ನಿಗೂ ಮುನ್ನ ಹಿಟ್‌ಮ್ಯಾನ್ ರೋಹಿತ್ ಶರ್ಮ ಅವರ ಪತ್ನಿ ರಿತಿಕಾ ಸಾಜ್ದೇಹ್ ಅವರು ನೀಡಿದ ಸಲಹೆಯನ್ನು ನಾನು ಚಾಚೂ ತಪ್ಪದೇ ಪಾಲಿಸಿದ್ದೇನೆ ಎಂದು ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಅಷ್ಟಕ್ಕೂ ಆ ಸಲಹೆ ಏನು? ಅದರಿಂದಾದ ಅನುಕೂಲ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾಕಪ್ ಫೈನಲ್ನಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಗೆದ್ದು ಇತಿಹಾಸ ಸೃಷ್ಟಿಸಿತು. ಸರಣಿಯ ಆರಂಭದಿಂದ ಕೊನೆಯವರೆಗೆ ಸಾಮೂಹಿಕ ಪ್ರದರ್ಶನ ನೀಡಿ ಕಪ್ ಎತ್ತಿ ಹಿಡಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾವನ್ನು ಬಿಸಿಸಿಐ ಮತ್ತು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
ವೈಯಕ್ತಿಕ ವೈಫಲ್ಯಗಳ ಹೊರತಾಗಿಯೂ, ಸೂರ್ಯಕುಮಾರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಅವರು ಮೈದಾನದಲ್ಲಿ ಚತುರ ತಂತ್ರಗಳೊಂದಿಗೆ ತಂಡವನ್ನು ಮುನ್ನಡೆಸಿದರು ಮತ್ತು ಅದನ್ನು ಗೆಲುವಿನ ಹಾದಿಯಲ್ಲಿ ಸಾಗಿಸಿದರು. ಹ್ಯಾಂಡ್‌ಶೇಕ್ ಇಲ್ಲದ ಘಟನೆಯಿಂದ ಕೊನೆಯ ದಿನದ ಟ್ರೋಫಿ ಇಲ್ಲದ ಆಚರಣೆಯವರೆಗೆ, ಸರಣಿ ವಿವಾದಗಳ ನಡುವೆ ಸೂರ್ಯಕುಮಾರ್ ಅವರು ತಮ್ಮ ನಾಯಕತ್ವದ ಜವಾಬ್ದಾರಿಗಳನ್ನು ತುಂಬಾ ಕೂಲ್ ಆಗಿ ನಿರ್ವಹಿಸಿದರು. ಅವರು ಪಾಕಿಸ್ತಾನ ತಂಡವನ್ನು ನಡೆಸಿಕೊಂಡ ರೀತಿ ಅವರನ್ನು ಭಾರತೀಯ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿಸಿತು.
ಅಂದಹಾಗೆ, ಸೂರ್ಯಕುಮಾರ್ ಯಾದವ್ ಅವರು ಏಷ್ಯಾ ಕಪ್ ಟೂರ್ನಿಯುದ್ದಕ್ಕೂ ತುಂಬಾ ಕೂಲ್ ಆಗಿ ನಡೆದುಕೊಳ್ಳಲು ಕಾರಣವೇನೆಂದರೆ, ರೋಹಿತ್ ಶರ್ಮ ಪತ್ನಿ ರಿತಿಕಾ ಸಾಜ್ದೇಹ್ ಅವರು ನೀಡಿದ ಸಲಹೆಯಂತೆ. ಇದನ್ನು ಸ್ವತಃ ಸೂರ್ಯ ಅವರೇ ಹೇಳಿಕೊಂಡಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸೂರ್ಯಕುಮಾರ್, ಪ್ರಮುಖ ಪಂದ್ಯಾವಳಿಗಳಲ್ಲಿ ಆಡುವ ಮೊದಲು ಸಾಮಾಜಿಕ ಜಾಲತಾಣಗಳಿಂದ ದೂರವಿರುವಂತೆ ರಿತಿಕಾ ಅವರು ರೋಹಿತ್ ಶರ್ಮಗೆ ಹೇಳಿದ್ದರು. ಅದೇ ಸಲಹೆಯನ್ನು ನಾನು ಕೂಡ ಅನುಸರಿಸುತ್ತಿದ್ದೇನೆ ಎಂದು ತಿಳಿಸಿದರು.
ಏಷ್ಯಾಕಪ್ ಆಡುವ ಮೊದಲು ನನ್ನ ಫೋನ್‌ನಿಂದ ಎಲ್ಲಾ ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ಗಳನ್ನು ಅಳಿಸಿದ್ದೇನೆ. ಸಾಮಾಜಿಕ ಜಾಲತಾಣದಿಂದ ದೂರವಿದ್ದಿದ್ದರಿಂದ ನನ್ನ ಮನಸ್ಸಿಗೆ ಶಾಂತಿ ದೊರಕಿತು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ನೆರವಾಯಿತು ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಏಷ್ಯಾ ಕಪ್ ಆಡಲು ದುಬೈಗೆ ಬರುವ ಮೊದಲೇ ನಾನು ನನ್ನ ಫೋನ್‌ನಿಂದ ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತು ಫೇಸ್‌ಬುಕ್ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿದೆ. ಸಂವಹನಕ್ಕಾಗಿ ನಾನು ವಾಟ್ಸ್ಆ್ಯಪ್ ಮಾತ್ರ ಇಟ್ಟುಕೊಂಡಿದ್ದೆ. ನನ್ನ ಫೋನ್‌ನಲ್ಲಿ ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ಗಳಿದ್ದರೆ, ಅದರಲ್ಲಿ ಬರುವ ಎಲ್ಲ ಸಂದೇಶಗಳನ್ನು ನಾವು ನೋಡಲು ಬಯಸುತ್ತೇವೆ. ಮೆಗಾ ಟೂರ್ನಮೆಂಟ್‌ಗಳನ್ನು ಆಡುವ ಮೊದಲು ರೋಹಿತ್ ಶರ್ಮ ಸಾಮಾಜಿಕ ಜಾಲತಾಣದಿಂದ ದೂರವಿರುತ್ತಾರೆ ಎಂದು ರಿತಿಕಾ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ರೋಹಿತ್ ತನ್ನ ಫೋನ್‌ನಿಂದ ಅಪ್ಲಿಕೇಶನ್‌ಗಳನ್ನು ಅಳಿಸುತ್ತಾರೆ ಎಂದು ರಿತಿಕಾ ಅವರು ಹೇಳಿದರು. ಹೀಗಾಗಿ ನಾನು ಕೂಡ ಅದನ್ನು ಅನುಸರಿಸುತ್ತಿದ್ದೇನೆ. ಇದು ನನಗೆ ಒಳ್ಳೆಯದನ್ನುಂಟುಮಾಡಿದೆ ಎಂದು ಸೂರ್ಯಕುಮಾರ್ ಹೇಳಿದರು. (ಏಜೆನ್ಸೀಸ್)