

First Period : ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
12 ವರ್ಷದ ಬಾಲಕಿಯನ್ನು ವಾಟ್ಸ್ಆ್ಯಪ್ ಮೂಲಕ ಮಾರಾಟ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶೋಭಾ ಮತ್ತು ಆಕೆಯ ಗೆಳೆಯ ತುಳಸಿಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಮೊದಲ ಬಾರಿಗೆ ಋತುಮತಿಯಾದ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಾನಸಿಕ ಮತ್ತು ಲೈಂಗಿಕ ಅಸ್ವಸ್ಥತೆ ಗುಣವಾಗುತ್ತದೆ ಎಂಬ ಸಂದೇಶವನ್ನು ಹರಡುವ ಮೂಲಕ ಹುಡುಗಿಯರನ್ನು ಮಾರಾಟ ನಡೆಸಲಾಗಿತ್ತು ಎನ್ನಲಾಗಿದೆ.
ಹುಡುಗಿಯರ ಮಾರಾಟ ಪ್ರಯತ್ನವು ಸ್ವಯಂಸೇವಾ ಸಂಘಗಳ ಗಮನಕ್ಕೆ ಬಂದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ಒಡನಾಡಿ ಸೇವಾ ಸಂಘ ಎಂಬ ಸಂಘಟನೆಯು ಈ ಕರಾಳ ಜಾಲದ ಬಗ್ಗೆ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು. ಬಳಿಕ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಹುಡುಗಿಯರ ಮಾರಾಟದ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಂದಹಾಗೆ, ಮಾರಾಟ ಜಾಲವು ಹುಡುಗಿಯರ ಚಿತ್ರಗಳನ್ನು ವಾಟ್ಸ್ಆ್ಯಪ್ನಲ್ಲಿ ಪ್ರಸಾರ ಮಾಡಿತ್ತು. ಆರೋಪಿಗಳು ಮಾನಸಿಕವಾಗಿ ಬಳಲುತ್ತಿರುವ ಹಾಗೂ ಲೈಂಗಿಕ ಆಸಕ್ತಿ ಕುಗ್ಗಿರುವವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮೊದಲ ಬಾರಿ ಋತುಮತಿಯಾದ ಹುಡುಗಿಯರ ಜತೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಅವರ ಮಾನಸಿಕ ಕಾಯಿಲೆ ಗುಣವಾಗುತ್ತದೆ ಎಂದು ನಂಬಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಮಾರಾಟ ಜಾಲದ ಜಾಹೀರಾತನ್ನು ನೋಡಿದ ನಂತರ, ಒಡನಾಡಿ ಸೇವಾ ಸಂಘದ ಕಾರ್ಯಕರ್ತರು ಶೋಭಾ ಅವರನ್ನು ಸಂಪರ್ಕಿಸಿದರು. ಹುಡುಗಿಯನ್ನು ಮೈಸೂರಿಗೆ ಕರೆತರುವಂತೆಯೂ ಕೇಳಿಕೊಂಡರು. ಒಪ್ಪಂದದ ಪ್ರಕಾರ, ಶೋಭಾ ಮತ್ತು ತುಳಸಿಕುಮಾರ್ ಹುಡುಗಿಯೊಂದಿಗೆ ಬಂದರು. ಇದಕ್ಕೂ ಮುನ್ನವೇ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸಂಘದವರು ಹುಡುಗಿಯನ್ನು ನೋಡಿದ ನಂತರ, ಪೊಲೀಸರು ಬರುವವರೆಗೆ ಕಾಯುತ್ತಿದ್ದರು. ಮಗುವನ್ನು 20 ಲಕ್ಷ ರೂ.ಗೆ ಮಾರಾಟಕ್ಕೆ ಇಡಲಾಗಿತ್ತು. ಪೊಲೀಸರು ಬರುವವರೆಗೆ ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿ ಸಂಘಟನೆಯ ಕಾರ್ಯಕರ್ತರು ಸಮಯ ಮುಂದೂಡುತ್ತಿದ್ದರು. ಅಂತಿಮವಾಗಿ ಪೊಲೀಸರು ಸ್ಥಳಕ್ಕೆ ತಲುಪಿದ ನಂತರ ಆರೋಪಿಗಳನ್ನು ಬಂಧಿಸಲಾಯಿತು. (ಏಜೆನ್ಸೀಸ್)