ಕ್ರೀಡೆ

ಮುಂದಿನ ವರ್ಷ ಧೋನಿ ಐಪಿಎಲ್ ಆಡದಿದ್ದರೆ ಸುರೇಶ್ ರೈನಾ ಕೂಡ ಗುಡ್‌ಬೈ..!

ನವದೆಹಲಿ: ನಾಯಕ ಎಂಎಸ್ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡದಿದ್ದರೆ, ನಾನು ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ತಿಳಿಸಿದ್ದಾರೆ. ಧೋನಿ ಐಪಿಎಲ್‌ನಲ್ಲಿ ನಿವೃತ್ತಿಯಾಗುವವರೆಗೂ ನಾನು ಕೂಡ ಲೀಗ್‌ನಲ್ಲಿ ಆಡುವೆ. ಒಂದು ವೇಳೆ ಪ್ರಸಕ್ತ ವರ್ಷ ಸಿಎಸ್‌ಕೆ ತಂಡ ಟ್ರೋಫಿ ಜಯಿಸಿದರೆ, 2022ರ ಆವೃತ್ತಿಯಲ್ಲಿ ಆಡುವಂತೆ ಧೋನಿ ಅವರ ಮನವೊಲಿಸುವುದಾಗಿ ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಸದ್ಯ ಕೋವಿಡ್‌ನಿಂದ ಸ್ಥಗಿತಗೊಂಡಿರುವ 14ನೇ ಐಪಿಎಲ್‌ನಲ್ಲಿ ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಲೀಗ್‌ನ ಉಳಿದ 31 ಪಂದ್ಯಗಳು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಿಗದಿಯಾಗಿವೆ.

‘ನನಗೆ ಇನ್ನು ನಾಲ್ಕು ವರ್ಷ ಆಡುವ ಸಮಯವಿದೆ. ಮುಂದಿನ ವರ್ಷ ಮತ್ತೆರಡು ತಂಡಗಳು ಲೀಗ್‌ನಲ್ಲಿ ಆಡಲಿವೆ. ಆದರೆ ನಾನು ಮಾತ್ರ ಲೀಗ್‌ನಲ್ಲಿ ಸಿಎಸ್‌ಕೆ ಪರ ಮಾತ್ರ ಆಡುವೆ’ ಎಂದು ರೈನಾ ಕ್ರೀಡಾ ವೆಬ್‌ಸೈಟ್‌ವೊಂದಕ್ಕೆ ರೈನಾ ತಿಳಿಸಿದ್ದಾರೆ. ಒಂದು ವೇಳೆ ಧೋನಿ ಭಾಯ್ ಮುಂದಿನ ಆವೃತ್ತಿಯಲ್ಲಿ ಆಡದಿದ್ದರೆ ನಾನು ಕೂಡ ಲೀಗ್‌ನಿಂದ ಹಿಂದೆ ಸರಿಯುವೆ. ಇಬ್ಬರು 2008ರಿಂದ ಒಟ್ಟಿಗೆ ಸಿಎಸ್‌ಕೆ ಪರ ಆಡಿಕೊಂಡು ಬಂದಿದ್ದೇವೆ ಎಂದು ರೈನಾ ಹೇಳಿದ್ದಾರೆ.

ಧೋನಿ ಹಾಗೂ ರೈನಾ 2008ರಿಂದ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಎರಡು ವರ್ಷಗಳ (2016, 17) ಕಾಲ ಸಿಎಸ್‌ಕೆ ತಂಡ ಅಮಾನತಿನಲ್ಲಿದ್ದ ವೇಳೆ ಇಬ್ಬರು ಬೇರೆ ತಂಡಗಳನ್ನು ಪ್ರತಿನಿಧಿಸಿದ್ದರು. ಧೋನಿ ಪುಣೆ ಸೂಪರ್‌ಜೇಂಟ್ಸ್ ತಂಡದ ಪರ ಆಡಿದ್ದರೆ, ರೈನಾ ಗುಜರಾತ್ ಲಯನ್ಸ್ ತಂಡದ ನಾಯಕನಾಗಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ವಿದಾಯ ಹೇಳಿದ್ದರು. ಜುಲೈ 7 ರಂದು ಧೋನಿ 40ನೇ ವರ್ಷದ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಕ್ರೀಡಾ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ರೈನಾ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.