ಕ್ರೀಡೆ

ಐಪಿಎಲ್‌ಗೆ ಸುರೇಶ್ ರೈನಾ ವಾಪಸಾತಿ ಕಷ್ಟಕರ..?

ಮುಂಬೈ: ವೈಯಕ್ತಿಕ ಕಾರಣ ನೀಡಿ ದುಬೈಯಿಂದ ತವರಿಗೆ ವಾಪಸಾಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಕ್ರಿಕೆಟ್ ವಲಯಕ್ಕೆ ಶಾಕ್ ನೀಡಿದ್ದರು. ರೈನಾ ತವರಿಗೆ ವಾಪಸಾದ ಬೆನ್ನಲ್ಲೇ ಹಲವು ಊಹಾಪೋಹಗಳು ಹರಿದಾಡಿದ್ದವು. ಹೋಟೆಲ್ ಕೊಠಡಿ ವಿಚಾರ, ಧೋನಿ ಜತೆಗೆ ಮುನಿಸು, ತಂಡದ ಸಹ-ಆಟಗಾರರು ಸೇರಿದಂತೆ 13 ಮಂದಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಕ್ಕೆ ರೈನಾ ಬೇಜಾಗಿದ್ದರು ಎಂದೆಲ್ಲಾ ಸುದ್ದಿಗಳನ್ನು ಹರಿಬಿಡಲಾಗಿತ್ತು. ಇದೀಗ ಸುರೇಶ್ ರೈನಾ ಐಪಿಎಲ್ ಆಡಲು ಮತ್ತೆ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗಿತ್ತು. ಸುರೇಶ್ ರೈನಾ ಭಾರತಕ್ಕೆ ವಾಪಸ್ ಆದ ಕುರಿತು ಸೂಕ್ತ ಕಾರಣ ತಿಳಿಸಬೇಕು. ಅದರಲ್ಲೂ ತಿಳಿಸಿದ ಕಾರಣ ಬಿಸಿಸಿಐಗೆ ಮನವರಿಕೆಯಾದರಷ್ಟೇ ಐಪಿಎಲ್‌ನಲ್ಲಿ ಆಡಲು ಅನುಮತಿ ಸಿಗಲಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.

ಭಾರತಕ್ಕೆ ವಾಪಸಾದ ಬಳಿಕ ಪಂಜಾಬ್‌ನಲ್ಲಿ ಸಹೋದರ ಸಂಬಂಧಿಕರ ಹತ್ಯೆ ಕುರಿತು ಪ್ರತಿಕ್ರಿಯಿಸಿದ್ದ ರೈನಾ, ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಬಳಿಕ ಕೆಲ ಸಂದರ್ಶನಗಳಲ್ಲಿ ಮತ್ತೆ ಐಪಿಎಲ್‌ಗೆ ವಾಪಸಾಗುವ ಸುಳಿವು ನೀಡಿದ್ದರು. ತಂಡದ ಆಡಳಿತ ಮಂಡಳಿ, ನಾಯಕ ಧೋನಿ, ರೈನಾ ಪುನರಾಗಮನದ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿ ಎನ್.ಶ್ರೀನಿವಾಸನ್ ಹೇಳಿದ್ದರು. ರೈನಾ ವಾಪಸಾಗಬೇಕಾದರೆ, ಬಿಸಿಸಿಐ ಎದುರು ಸೂಕ್ತವಾಗಿ ವಿವರಣೆ ನೀಡಬೇಕಿದೆ. ದುಬೈನಿಂದ ರೈನಾ ವಾಪಸ್ ಆಗಿರುವ ಬಗ್ಗೆ ಮಂಡಳಿಗೆ ಇದುವರೆಗೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ರೈನಾ ಮತ್ತೊಮ್ಮೆ ದುಬೈಗೆ ತೆರಳಬೇಕಾದರೆ ಬಿಸಿಸಿಐ ಎದುರು ವಾಪಸ್ ಆಗಿದ್ದರ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ರೈನಾ ನೀಡಿದ ಮಾಹಿತಿ ಸೂಕ್ತವಾದರಷ್ಟೇ ತಂಡ ಕೂಡಿಕೊಳ್ಳಬಹುದು. ಇಲ್ಲವಾದರೆ ರೈನಾಗೆ ಅವಕಾಶ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿಕೊಂಡಿವೆ. ಒಂದು ವೇಳೆ ಖಿನ್ನತೆಯಿಂದ ಬಂದಿದ್ದರೆ, ಇದಕ್ಕೆ ಕಾರಣ ಏನು ಎಂದು ಗೊತ್ತಾಗಬೇಕು ಎಂದು ಮಂಡಳಿ ಮೂಲಗಳು ತಿಳಿಸಿವೆ.

ಐಪಿಎಲ್‌ನಿಂದ ಹಿಂದೆ ಸರಿದ ಆಟಗಾರರಿಗೆ ಮತ್ತೊಮ್ಮೆ ವಾಪಸಾಗಲು ಬಿಸಿಸಿಐ ಇದುವರೆಗೂ ಯಾವ ಆಟಗಾರನಿಗೂ ಅನುಮತಿ ನೀಡಿಲ್ಲ. ಇದಕ್ಕೂ ಮೊದಲು ಇಂಗ್ಲೆಂಡ್‌ನ ಕ್ರೀಸ್ ವೋಕ್ಸ್ ಲೀಗ್‌ನಿಂದ ಹಿಂದೆ ಸರಿದಿದ್ದರು. ಬಳಿಕ ಬೇಸರ ವ್ಯಕ್ತಪಡಿಸಿದರೂ ಲೀಗ್‌ನಿಂದ ಹಿಂದೆ ಸರಿಯಬೇಕಾಯಿತು. ಬಳಿಕ ಇವರ ಬದಲಿಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿತು.