ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ ಐಪಿಎಲ್ನಲ್ಲಿ ಹೊಸ ಇತಿಹಾಸ ರಚನೆ ಮಾಡಿದೆ. ಈವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹೆಸರಿನಲ್ಲಿದ್ದ ಅತ್ಯಧಿಕ ರನ್ ದಾಖಲೆಯನ್ನು ಎಸ್ಆರ್ಎಚ್ ಉಡೀಸ್ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್ಆರ್ಎಚ್ ತಂಡ 277 ರನ್ ಬಾರಿಸುವ ಮೂಲಕ ಅತ್ಯಧಿಕ ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಸ್ಆರ್ಎಚ್ ತಂಡದ ಈ ದಾಖಲೆಗೆ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವನ್ನೂ ತಳ್ಳಿಹಾಕುವಂತಿಲ್ಲ. ಇದೆಲ್ಲದರ ನಡುವೆ ಮತ್ತೊಂದು ಕಾರಣ ಬಯಲಾಗಿದೆ. ಅಲ್ಲದೇ ಇದೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ. ಎಸ್ಆರ್ಎಚ್ ತಂಡ ಒಂದೇ ಪಂದ್ಯದಲ್ಲಿ ಇಷ್ಟೊಂದು ರನ್ ಕಲೆಹಾಕಲು ಪರೋಕ್ಷವಾಗಿ ಸೂಪರ್ಸ್ಟಾರ್ ರಜಿನಿಕಾಂತ್ ಸಹ ಕಾರಣವಾಗಿದ್ದಾರೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು, ರಜಿನಿಯಿಂದ ಹೇಗೆ ಸಾಧ್ಯ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ ಓದಿ.
ಅಂದಹಾಗೆ ಎಸ್ಆರ್ಎಚ್ ತಂಡದ ಸಿಇಒ ಕಾವ್ಯಾ ಮಾರನ್ ಎಂಬುದು ಎಲ್ಲರಿಗು ತಿಳಿದಿದೆ. ತಮ್ಮ ತಂಡ ಆಡುವ ಪ್ರತಿಯೊಂದು ಪಂದ್ಯದಲ್ಲೂ ಕಾವ್ಯ ಉಪಸ್ಥಿತರಿದ್ದು, ಆಟಗಾರರನ್ನು ಹುರಿದುಂಬಿಸುತ್ತಾರೆ. ಕಾವ್ಯಾ ಅವರ ಹಾವ-ಭಾವವನ್ನು ಆಗಾಗ ಕ್ಯಾಮೆರಾಮನ್ ಸೆರೆಹಿಡಿಯುತ್ತಲೇ ಇರುತ್ತಾರೆ. ತಮ್ಮ ತಂಡ ಸೋತಾಗಲೆಲ್ಲ ಕಾವ್ಯಾ ತುಂಬಾ ಬೇಸರದಲ್ಲಿರುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಆದರೆ, ಕಳೆದ ಕೆಲವು ಸೀಸನ್ಗಳಿಂದ ಎಸ್ಆರ್ಎಚ್ ಪ್ರದರ್ಶನ ಕಳಪೆಯಾಗಿದ್ದರಿಂದ ಕಾವ್ಯ ಸದಾ ಡಲ್ ಆಗಿರುತ್ತಿದ್ದರು. ಕಾವ್ಯ ಅವರ ಸಪ್ಪೆ ಮುಖ ಕ್ಯಾಮೆರಾ ಕಣ್ಣಿಗೂ ಅನೇಕ ಬಾರಿ ಬಿದ್ದಿದ್ದು, ಇದನ್ನು ಸೂಪರ್ ಸ್ಟಾರ್ ರಜಿನಿಕಾಂತ್ ಸಹ ಗಮನಿಸಿದ್ದಾರೆ.
ಜೈಲರ್ ಸಿನಿಮಾದ ವಿಜಯೋತ್ಸವ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಮಾತನಾಡುತ್ತಾ ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಅವರಿಗೆ ಒಂದು ಸಲಹೆ ನೀಡಿದರು. ಕಾವ್ಯ ಮುಖವನ್ನು ನೋಡಲು ಆಗುತ್ತಿಲ್ಲ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಒಳ್ಳೆಯ ಆಟಗಾರರನ್ನು ಸೇರಿಸಿಕೊಂಡು ಕಾವ್ಯಾ ಮುಖದಲ್ಲಿ ನಗು ಅರಳಿಸಿ. ಐಪಿಎಲ್ ಸಮಯದಲ್ಲಿ ಟಿವಿಯಲ್ಲಿ ಕಾವ್ಯಾ ಮುಖ ನೋಡಿ ತುಂಬಾ ಬೇಸರವಾಗಿದೆ ಎಂದು ರಜಿನಿಕಾಂತ್ ಹೇಳಿದ್ದರು. ಇದನ್ನು ಕೇಳಿ ಕಾವ್ಯಾ ಮಾರನ್ ನಕ್ಕಿದ್ದರು.
ಅದೇ ರೀತಿ ಐಪಿಎಲ್ ಇತಿಹಾಸದಲ್ಲೇ ಎಸ್ಆರ್ಎಚ್ ತಂಡ ಹೊಸ ದಾಖಲೆಯನ್ನು ಬರೆದಿದೆ. ಈ ದಾಖಲೆ ಕಾವ್ಯಾ ಮಾರನ್ ಮುಖದಲ್ಲಿ ನಗು ಅರಳಿಸಿದೆ. ಇದರ ಬೆನ್ನಲ್ಲೇ ರಜಿನಿಕಾಂತ್ ಅವರು ಕಾವ್ಯಾ ತಂದೆಗೆ ಸಲಹೆ ನೀಡಿದ್ದ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.
ಉತ್ತಮ ಆಟಗಾರರನ್ನು ನೇಮಿಸಿಕೊಳ್ಳುವಂತೆ ರಜನಿಕಾಂತ್ ನೀಡಿದ ಸಲಹೆ ಮೇರೆಗೆ ಸನ್ ರೈಸರ್ಸ್ ಹೈದರಾಬಾದ್, ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಐಪಿಎಲ್ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಹೈದರಾಬಾದ್ ತಂಡ ಖರೀದಿ ಮಾಡಿತು. (ಏಜೆನ್ಸೀಸ್)