More

    ಇಷ್ಟೊಂದು ಅಹಂಕಾರ ಒಳ್ಳೆಯದಲ್ಲ ಈಗಲಾದ್ರೂ ಬದಲಾಗಿ! ಹಾರ್ದಿಕ್ ದುರ್ವರ್ತನೆ ವಿಡಿಯೋ ವೈರಲ್​, ನೆಟ್ಟಿಗರ ತರಾಟೆ

    ನವದೆಹಲಿ: ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಪಂದ್ಯವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 277 ರನ್​ಗಳ ಗರಿಷ್ಠ ಸ್ಕೋರ್ ದಾಖಲಿಸಿತು. ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೂಡ 246 ರನ್ ಗಳಿಸಿ ಪೈಪೋಟಿ ನೀಡಿತು. ಉಭಯ ತಂಡಗಳು 40 ಓವರ್‌ಗಳಲ್ಲಿ 523 ರನ್ ಗಳಿಸಿದವು. ಟಿ20 ಪಂದ್ಯದಲ್ಲಿ ಇಷ್ಟು ರನ್ ದಾಖಲಾದದ್ದು ಹಿಂದೆಂದೂ ನಡೆದಿರಲಿಲ್ಲ.

    ಆದರೆ, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯವಾಗಿ ಸೋತಿದ್ದು ಗೊತ್ತೇ ಇದೆ. ಈ ಋತುವಿನಲ್ಲಿ ಮುಂಬೈಗೆ ಇದು ಸತತ ಎರಡನೇ ಸೋಲು. ಈ ಸೋಲಿನೊಂದಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ನಾಯಕತ್ವದ ವೈಫಲ್ಯದಿಂದಲೇ ಮುಂಬೈ ಸೋಲುತ್ತಿದೆ ಎಂಬ ಆರೋಪವಿದೆ. ಇಷ್ಟೆಲ್ಲ ಟೀಕೆಗಳ ನಡುವೆಯೂ ಪಾಂಡ್ಯ ವರ್ತನೆ ಮಾತ್ರ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

    ಮುಂಬೈ ಇಂಡಿಯನ್ಸ್‌ ಬೌಲಿಂಗ್ ಕೋಚ್, ಲೆಜೆಂಡರಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರಿಗೆ ಅಗೌರವ ತೋರುವ ರೀತಿಯಲ್ಲಿ ಪಾಂಡ್ಯ ನಡೆದುಕೊಂಡಿದ್ದಾರೆ. ಎಸ್​ಆರ್​​ಎಚ್​ ವಿರುದ್ಧ ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಕೈಕುಲುಕಿ, ಅಪ್ಪಿಕೊಳ್ಳುವುದು ಸಾಮಾನ್ಯ. ಈ ವೇಳೆ ಲಸಿತ್​ ಮಾಲಿಂಗ ಅವರು ಪಾಂಡ್ಯ ಬಳಿ ಬಂದು ಅಪ್ಪಿಕೊಳ್ಳಲು ಮುಂದಾದರು. ಆದರೆ, ಲಸಿತ್​ ಮಾಲಿಂಗ ಮುಖವನ್ನೇ ನೋಡದ ಪಾಂಡ್ಯ, ಗಂಟು ಮುಖ ಹಾಕಿಕೊಂಡು ಅವರನ್ನು ಪಕ್ಕಕ್ಕೆ ತಳ್ಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಾಂಡ್ಯ ಅವರು ದುರಹಂಕಾರದ ವರ್ತನೆ ಸರಿಯಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

    ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಪಾಂಡ್ಯ ಡಗೌಟ್​ನಲ್ಲಿ ಇರುವಾಗ ಲಸಿತ್​ ಮಾಲಿಂಗ ಮತ್ತು ಕೀರನ್​ ಪೊಲ್ಲಾರ್ಡ್​ ಇಬ್ಬರು ಕುರ್ಚಿ ಮೇಲೆ ಕುಳಿತಿರುತ್ತಾರೆ. ಈ ವೇಳೆ ಕುರ್ಚಿ ಬಿಟ್ಟುಕೊಡುವಂತೆ ಹಾರ್ದಿಕ್​ ಕೇಳುತ್ತಾರೆ. ಬಳಿಕ ಪೋಲ್ಲಾರ್ಡ್​ ಮೇಲೆ ಏಳಲು ಯತ್ನಿಸುತ್ತಾರೆ. ಆದರೆ, ಲಸಿತ್​ ಮಾಲಿಂಗ ಅವರನ್ನು ತಡೆದು ತಾವೇ ಎದ್ದು, ಅಲ್ಲಿಂದ ಹೊರಟುಬಿಡುತ್ತಾರೆ. ಈ ವೇಳೆ ಪೋಲ್ಲಾರ್ಡ್​ ಮತ್ತು ಮಾಲಿಂಗ ಮುಖದಲ್ಲೂ ತುಂಬಾ ಕೋಪವಿರುತ್ತದೆ. ಪಾಂಡ್ಯ ನಾಯಕತ್ವ ಇಬ್ಬರು ಕೊಂಚವೂ ಇಷ್ಟವಿಲ್ಲ ಎನ್ನವ ಭಾವನೆ ಅವರಲ್ಲಿ ಕಾಣುತ್ತದೆ.

    ಇನ್ನೂ ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಅವರನ್ನು ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್​ ಮಾಡುವಂತೆ ಸೂಚಿಸಿದ್ದು ಕೂಡ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಘಟನೆಯಿಂದ ಇಡೀ ಕ್ರಿಕೆಟ್ ಜಗತ್ತು ಪಾಂಡ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ನಾಯಕ, ಹಿರಿಯ ಆಟಗಾರರನ್ನು ಈ ರೀತಿ ನಡೆಸಿಕೊಳ್ಳುವ ಮೂಲಕ ತಮ್ಮ ಅಹಂಕಾರ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಷ್ಟೆಲ್ಲ ಆದ್ರೂ ಪಾಂಡ್ಯ ಅವರಲ್ಲಿ ಏನೂ ಬದಲಾಗಿಲ್ಲ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಗೆ ಅವಮಾನ ಮಾಡಿದ್ದ ಪಾಂಡ್ಯ, ಎರಡನೇ ಪಂದ್ಯದಲ್ಲಿ ಮಾಲಿಂಗ ಅವರೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಪಾಂಡ್ಯ ವರ್ತನೆ ನೋಡಿ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಹಿರಿಯರಿಗೆ ಹೇಗೆ ಗೌರವ ಕೊಡಬೇಕೆಂಬುದು ಗೊತ್ತಿಲ್ಲವೇ? ಇಂತಹ ದುರ್ವರ್ತನೆಯಿಂದಲೇ ಮುಂಬೈ ಇಂಡಿಯನ್ಸ್​ ತಂಡಕ್ಕೆ ಇಂಥಾ ದುರ್ಗತಿ ಬಂದಿರುವುದು ಎಂದು ನೆಟ್ಟಿಗರು ಪಾಂಡ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಂದಹಾಗೆ ರೋಹಿತ್​ ಶರ್ಮ ನಾಯಕತ್ವವನ್ನು ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿದ ಬಳಿಕ ಸಾಕಷ್ಟು ಪರ-ವಿರೋಧದ ಚರ್ಚೆಗೆ ಒಳಗಾಗುತ್ತಲೇ ಬಂದಿರುವ ತಂಡ ಮುಂಬೈ ಇಂಡಿಯನ್ಸ್​. ಇದೀಗ ತಂಡ ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇದಕ್ಕೆ ತಂಡದಲ್ಲಿನ ಒಡಕು ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ. ಮುಂಬೈ ತಂಡದಲ್ಲಿ ಹಾರ್ದಿಕ್​-ರೋಹಿತ್​ ಅವರ ಎರಡು ಬಣಗಳಿವೆ. ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಅವರು ಹಾರ್ದಿಕ್​ ಪಾಂಡ್ಯ ಬಣದಲ್ಲಿದ್ದರೆ, ರೋಹಿತ್​ ಅವರ ಗುಂಪಿನಲ್ಲಿ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​, ತಿಲಕ್​ ವರ್ಮ ಮತ್ತಿತರರು ಇದ್ದಾರೆ ಎಂದು ಹಿಂದಿ ಪತ್ರಿಕೆಯೊಂದರ ವರದಿಯಲ್ಲಿ ತಿಳಿಸಲಾಗಿದೆ.

    ಆಟಗಾರರಲ್ಲಿನ ನಿಷ್ಠೆಯಲ್ಲಿರುವ ವಿಭಜನೆಯೇ ತಂಡದ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ದಿಕ್​ ಪಾಂಡ್ಯ ತಂಡದ ಅಭಿಮಾನಿಗಳಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ, ಸ್ಟೇಡಿಯಂನಲ್ಲೂ ಹಾರ್ದಿಕ್​ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಆದರೆ ತಂಡದ ಮಾಲೀಕರ ಬೆಂಬಲ ಈಗಲೂ ಹಾರ್ದಿಕ್​ಗೆ ಇದೆ ಎಂದು ವಿವರಿಸಲಾಗಿದೆ. (ಏಜೆನ್ಸೀಸ್​)

    ಹಾರ್ದಿಕ್​​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು… ಉರಿಯುವ ಬೆಂಕಿಗೆ ತುಪ್ಪ ಸುರಿದ ಸೂರ್ಯಕುಮಾರ್​ ಯಾದವ್​!

    ಇದು ಕ್ಯಾಪ್ಟನ್ಸಿ ಅಂದ್ರೆ! ಪಂದ್ಯದ ನಡುವೆ ರೋಹಿತ್​ ಮಾಡಿದ ಮೋಡಿಗೆ ಹಾರ್ದಿಕ್​ ಕಕ್ಕಾಬಿಕ್ಕಿ, ನೋಡಿ ಕಲಿ ಅಂದ್ರು ಫಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts