

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಪ್ರಸಕ್ತ ಐಪಿಎಲ್-2024 ಟೂರ್ನಿಯಲ್ಲಿ ಪದೇಪದೆ ಎಡವುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕಳಪೆ ನಾಯಕತ್ವದಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯ ಅಂತಿಮ ಹಂತದಲ್ಲಿ ಗುಜರಾತ್ ಪಾಲಾಯಿತು. ಮುಂದಿನ ಪಂದ್ಯದಲ್ಲಾದರೂ ಹಾರ್ದಿಕ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ ಅಂದ್ರೆ ಮತ್ತೆ ಅದನ್ನೇ ಮುಂದುವರಿಸಿದರು.
ನಿನ್ನೆ (ಮಾರ್ಚ್ 27) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹಾರ್ದಿಕ್ ನಿಲುವು ಬದಲಾಗಲಿಲ್ಲ. ನಾಯಕತ್ವದ ಕೆಟ್ಟ ನಿರ್ಧಾರಗಳಿಂದ ಮುಂಬೈ ತಂಡಕ್ಕೆ ಮತ್ತೊಂದು ಸೋಲಿನ ಅನುಭವವಾಯಿತು. ಆದರೆ, ಲೆಜೆಂಡರಿ ರೋಹಿತ್ ಶರ್ಮ ಇದೇ ಸಂದರ್ಭದಲ್ಲಿ ತಾವೇ ಅತ್ಯುತ್ತಮ ಸಾಯಕ ಎಂಬುದನ್ನು ಸಾಬೀತುಪಡಿಸಿದರು. ಹಾರ್ದಿಕ್ಗೆ ನಾಯಕತ್ವ ಎಂದರೆ ಏನೆಂದು ತೋರಿಸಿಕೊಟ್ಟರು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬ್ಯಾಟಿಂಗ್ನಲ್ಲಿ ಬೆಂಕಿಯ ಜ್ವಾಲೆಯಂತೆ ಸಿಡಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಎದುರಿಸಿದ ಹೆಡ್ 62 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಔಟಾದರು. ಮುಂಬೈ ಬೌಲರ್‌ಗಳನ್ನು ಹೆಡ್ ಮನಸೋ ಇಚ್ಛೆ ದಂಡಿಸಿದರು. ಹೆಡ್ ಆಟದ ವೇಗವನ್ನು ನೋಡಿದಾಗ ಇನ್ನೂ ಎರಡು ಓವರ್ ಕ್ರೀಸ್ನಲ್ಲಿ ಇದ್ದಿದ್ದರೆ ಶತಕ ಸಿಡಿಸಿಬಿಡುತ್ತಿದ್ದರು.
ಆದರೆ, ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ವಹಿಸಿಕೊಂಡರು. ಹೆಡ್ ವಿಕೆಟ್ ಉರುಳಿಸಲು ಬಿಗಿ ಫೀಲ್ಡಿಂಗ್ ಸೆಟ್ ಮಾಡಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಂತೆ ಹಾರ್ದಿಕ್ಗೆ ಸೂಚನೆ ನೀಡಿದರು. ಗೆರಾಲ್ಡ್ ಕೋಟ್ಜಿಗೆ ಬೌಲ್ ಮಾಡಲು ಕೆಲ ಸಲಹೆ ನೀಡಿದರು. ಅದರಂತೆ ಕೋಟ್ಜಿ ಎಸೆದ ಬಾಲ್ ಅನ್ನು ಬಲವಾಗಿ ಹೊಡೆಯಲು ಹೋಗಿ ನಮನ್ ಧಿರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್, ರೋಹಿತ್ ರಣತಂತ್ರ ನೋಡಿ ಒಂದು ಕ್ಷಣ ಹುಬ್ಬೇರಿಸಿದರು. ರೋಹಿತ್ ಅವರ ಸರಿಯಾದ ಅಂದಾಜು, ಸರಿಯಾದ ಯೋಜನೆ, ಬ್ಯಾಟರ್ಗಳನ್ನು ಕೆರಳಿಸುವುದು ಮತ್ತು ಬೌಲರ್ಸ್ಗೆ ಆತ್ಮವಿಶ್ವಾಸ ತುಂಬಿದರೆ ವಿಕೆಟ್ಗಳನ್ನು ಪಡೆಬಹುದು ಎಂಬ ರೋಹಿತ್ ತಂತ್ರ ಒಂದು ಕ್ಷಣ ಹಾರ್ದಿಕ್ ಮೈಂಡ್ ಬ್ಲಾಕ್ ಮಾಡಿತು. ತಂಡ ಸಂಕಷ್ಟದಲ್ಲಿದ್ದ ವೇಳೆ ರೋಹಿತ್, ತನ್ನ ಜವಾಬ್ದಾರಿ ಮೆರೆದಿದ್ದನ್ನು ನೋಡಿ, ನೆಟ್ಟಿಗರು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.
ಮುಂಬೈಗೆ 5 ಬಾರಿ ಐಪಿಎಲ್ ಕಪ್ ಸುಮ್ಮನೇ ಬಂದಿಲ್ಲ. ನಾಯಕತ್ವ ಎಂದರೆ ಇದೇ ಎನ್ನುತ್ತಾರೆ. ಹಾರ್ದಿಕ್, ರೋಹಿತ್ನಿಂದ ಕಲಿಯಲಿ, ನಾಯಕ ಯಾವತ್ತಿದ್ದರೂ ನಾಯಕನೇ ಎಂದು ರೋಹಿತ್ರನ್ನು ಹೊಗಳುತ್ತಿದ್ದು, ಹಾರ್ದಿಕ್ರನ್ನು ಜುಜುಬಿ ಹೊಸ ನಾಯಕ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ರೋಹಿತ್ಗೆ ನಾಯಕತ್ವ ಹಸ್ತಾಂತರಿಸದಿದ್ದರೆ ಮುಂಬೈ ಚೇತರಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತಿದೆ. ಅಂದಹಾಗೆ ರೋಹಿತ್ ನಾಯಕತ್ವದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
ಪಂದ್ಯದ ವಿಚಾರಕ್ಕೆ ಬಂದರೆ ಮೊದಲಿಗೆ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. (ಏಜೆನ್ಸೀಸ್)