ಕ್ರೀಡೆ

ಸಡನ್​ ಆಗಿ ನೀವು...​; ಟಿ20 ವಿಶ್ವಕಪ್​ ವೇಳಾಪಟ್ಟಿ ಕುರಿತು ಅಸಮಾಧಾನ ಹೊರಹಾಕಿದ ಸ್ಟಾರ್ಕ್​

ನವದೆಹಲಿ: ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್​ ಸಮಾರೋಪಗೊಂಡು ಮೂರು ವಾರಗಳಾಗುತ್ತ ಬಂದರೂ ಯಾಕೋ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಅಸಮಾಧಾನ ಹೊರಹಾಕುವುದನ್ನು ಸದ್ಯಕ್ಕೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆಟಗಾರ ಮಿಚೆಲ್​ ಸ್ಟಾರ್ಕ್​ ಈ ಬಗ್ಗೆ ಮಾತನಾಡಿದ್ದು, ಐಸಿಸಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟಿ20 ವಿಶ್ವಕಪ್​ ವೇಳಾಪಟ್ಟಿ ಕುರಿತು ಕಿಡಿಕಾರಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಸ್ಟಾರ್ಕ್​, ಬ್ಯಾಕ್​ ಟು ಬ್ಯಾಕ್​ ಪಂದ್ಯಗಳನ್ನು ಆಡುವುದು ಅಷ್ಟು ಸುಲಭದ ಮಾತಲ್ಲ ಎಂದು ನಾನು ಭಾವಿಸುತ್ತೇನೆ. ಸೇಂಟ್​ ವಿನ್ಸೆಂಟ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಷನ್​ ಅಗರ್​ ಚೆನ್ನಾಗಿ ಬೌಲಿಂಗ್​ ಮಾಡಿದರು. ಅವರ ಆಟದ ಬಗ್ಗೆ ನಾನೇನೂ ಹೆಚ್ಚಿಗೇ ಹೇಳುವುದಿಲ್ಲ.

ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರುವುದಿಲ್ಲ ಎಂಬುದಕ್ಕೆ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳೇ ಉತ್ತಮ ಸಾಕ್ಷಿಯಾಗಿದೆ. ನಾವು ಬೇರೆ ತಂಡಗಳಿಗಿಂತ ಚೆನ್ನಾಗಿ ಆಡಿದ್ದೆವು ಮತ್ತು ಫೇವರೆಟ್​ ತಂಡಗಳಲ್ಲಿ ಗುರುತಿಸಿಕೊಂಡಿದ್ದೆವು. ಇದ್ದಕ್ಕಿದ್ದಂತೆ ನಮ್ಮನ್ನು ಬೇರೆ ಗುಂಪಿಗೆ ಹಾಕಲಾಯಿತು ವೆಸ್ಟ್​ ಇಂಡೀಸ್​ನಲ್ಲಿ ನಮಗೆ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಇದಲ್ಲದೆ ನಮ್ಮ ಪ್ರಯಾಣವು ತಡವಾಗಿ ಆಗುತ್ತಿತ್ತು.

ನನ್ನ ಪ್ರಕಾರ ವೇಳಾಪಟ್ಟಿ ತಯಾರಿಕೆ ಎಡವಟ್ಟಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ವೆಸ್ಟ್​ಇಂಡೀಸ್​ನಲ್ಲಿ ಪ್ರಯಾಣಿಸುವುದು ಅಷ್ಟು ಸುಲಭದ ಮಾತಲ್ಲ. ಲೀಗ್​ ಹಂತಕ್ಕಿಂತ ಸೂಪರ್​ 08ನಲ್ಲಿ ಆಯೋಜನೆಗೊಂಡಿದ್ದ ಪಂದ್ಯಗಳು ನಮಗೆ ಹೆಚ್ಚು ಕಷ್ಟಕರವಾಯಿತು ಎಂದು ಮಿಚೆಲ್​ ಸ್ಟಾರ್ಕ್​ ಪರೋಕ್ಷವಾಗಿ ಟಿ20 ವಿಶ್ವಕಪ್​ ವೇಳಾಪಟ್ಟಿ ಕುರಿತು ಕಿಡಿಕಾರಿದ್ದಾರೆ.