ದುಬೈ: ವಿಶ್ವ ಶ್ರೇಷ್ಠ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್‌ನಲ್ಲಿ ಆಡುವುದು ಪಕ್ಕಾ ಆಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಂದೆಯವರನ್ನು ನೋಡುವ ಸಲುವಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದ ಬೆನ್ ಸ್ಟೋಕ್ಸ್ ಇದೀಗ ಯುಎಇಯತ್ತ ಪ್ರಯಾಣ ಬೆಳೆಸಿದ್ದಾರೆ. ಯುಎಇ ತಲುಪಿದ ಬಳಿಕ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದು, ನಂತರ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟೋಕ್ಸ್ ಆಗಮನದೊಂದಿಗೆ ರಾಜಸ್ಥಾನ ರಾಯಲ್ಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
29 ವರ್ಷದ ಬೆನ್ ಸ್ಟೋಕ್ಸ್, ಆಗಸ್ಟ್ ತಿಂಗಳಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಮಧ್ಯದಲ್ಲಿಯೇ ತಂದೆ ನೋಡುವ ಸಲುವಾಗಿ ಇಂಗ್ಲೆಂಡ್ ತಂಡ ತೊರೆದಿದ್ದರು. ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿರುವ ಸ್ಟೋಕ್ಸ್ ತಂದೆ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ‘ಸ್ಟೋಕ್ಸ್ ಭಾನುವಾರ ಯುಎಇ ತಲುಪಲಿದ್ದು, 6 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ ತಂಡ ಕೂಡಿಕೊಳ್ಳಲಿದ್ದಾರೆ’ ಎಂದು ತಂಡದ ಮೂಲಗಳು ತಿಳಿಸಿವೆ. ಫ್ರಾಂಚೈಸಿ ಕೂಡ ಸ್ಟೋಕ್ಸ್ ಆಗಮನದ ಕುರಿತು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ…!
ರಾಜಸ್ಥಾನ ರಾಯಲ್ಸ್ ತಂಡ ಸ್ಟೋಕ್ಸ್ ಅವರನ್ನು 12.5 ಕೋಟಿ ರೂಪಾಯಿಗೆ ಕೊಂಡುಕೊಂಡಿತ್ತು. ಇಂಗ್ಲೆಂಡ್ ತಂಡದ ಪರ ಸ್ಟೋಕ್ಸ್ 67 ಟೆಸ್ಟ್, 95 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್ ತಂಡ, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು.