ಕ್ರೀಡೆ

ರೋಚಕ ಪಂದ್ಯಗಳಿಗಿಂತ ದಂಡಗಳೇ ಹೆಚ್ಚಾಯ್ತು! ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಸ್ಟಾರ್ ಆಟಗಾರರಿವರು | IPL 2025

IPL 2025: ಮಾ.22ರಿಂದ ಶುರುವಾದ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ಕ್ರಿಕೆಟ್​ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಇದೀಗ ದುಪ್ಪಟ್ಟಾಗಿಸಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕತೆಯತ್ತ ಸಾಗುತ್ತಿದ್ದು, ನೋಡುಗರಲ್ಲಿ ಆಟದ ಕ್ರೇಜ್​ ಅನ್ನು ಹುಟ್ಟುಹಾಕುತ್ತಿದೆ. 2025ರ ಲೀಗ್​ನಲ್ಲಿ ಒಂದಷ್ಟು ತಂಡಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದರೆ, ಇನ್ನೂ ಕೆಲವು ಟೀಮ್​ಗಳು ಭಾರೀ ನಿರಾಶೆ ಮೂಡಿಸುತ್ತಿವೆ, ಈ ಮಧ್ಯೆ ರೋಚಕ ಪಂದ್ಯಗಳಿಗಿಂತಲೂ ಆಟಗಾರರ ಮೇಲೆ ವಿಧಿಸುತ್ತಿರುವ ದಂಡಗಳ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಅಚ್ಚರಿ.

ಇತ್ತೀಚಿಗಿನ ಪಂದ್ಯದಲ್ಲಿ ದಂಡಕ್ಕೆ ತುತ್ತಾದ ಜಿಟಿ ವೇಗಿ ಇಶಾಂತ್ ಶರ್ಮ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪೆನಾಲ್ಟಿಗೆ ತುತ್ತಾದರು. ಇನ್ನೂ ಇಲ್ಲಿಯವರೆಗೂ ಸ್ಟಾರ್ ಆಟಗಾರರು ಭಾರೀ ದಂಡಕ್ಕೆ ಸಿಲುಕಿದ್ದಾರೆ. ಈ ಪಟ್ಟಿಯಲ್ಲಿ ಇಶಾಂತ್ ಜತೆಗೆ ಲಖನೌ ಸೂಪರ್ ಜೈಂಟ್ಸ್​ನ ವೇಗಿ ದಿಗ್ವೇಶ್ ರಥಿ, ಮುಂಬೈನ ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್​ನ ರಿಯಾನ್ ಪರಾಗ್ ಮತ್ತು ಎಲ್​ಎಸ್​ಜಿ ಕ್ಯಾಪ್ಟನ್​ ರಿಷಭ್ ಪಂತ್ ಸೇರಿದ್ದಾರೆ.

ಕ್ಯಾಪ್ಟನ್​ಗಳಾಗಿ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ ಮತ್ತು ರಿಯಾನ್ ಪರಾಗ್​ ತಮ್ಮ ತಂಡ ಮಂದಗತಿಯ ಓವರ್ ಮಾಡಿದ್ದಕ್ಕಾಗಿ ಭಾರೀ ಮೊತ್ತದ ದಂಡವನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಇನ್ನು ಬೌಲರ್​ ದಿಗ್ವೇಶ್ ರಥಿ ಎರಡು ಬಾರಿ ನೋಟ್‌ಬುಕ್ ಬರೆಯುವಂತೆ ಸಂಭ್ರಮಿಸಿದ ರೀತಿಗೆ ಬಿಸಿಸಿಐ ದಂಡವನ್ನು ವಿಧಿಸಿದೆ. ಭಾನುವಾರ (ಏ.06) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎಸ್‌ಆರ್‌ಎಚ್ ಮತ್ತು ಜಿಟಿ ನಡುವಿನ ಪಂದ್ಯದ ಸಂದರ್ಭದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಇಶಾಂತ್​ಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡವನ್ನು ವಿಧಿಸಿ, ಡಿಮೆರಿಟ್ ಪಾಯಿಂಟ್ ಘೋಷಿಸಲಾಯಿತು.

ಕಳೆದ ಆವೃತ್ತಿಯವರೆಗೂ ಸತತ ಮೂರು ಪಂದ್ಯಗಳಲ್ಲಿ ಮಂದಗತಿಯ ಓವರ್​ ಮಾಡಿದ ತಂಡಕ್ಕೆ ಭಾರೀ ದಂಡವನ್ನು ವಿಧಿಸುತ್ತಿದ್ದ ಬಿಸಿಸಿಐ, ಆ ತಂಡದ ಕ್ಯಾಪ್ಟನ್​ರನ್ನು ಮುಂದಿನ ಒಂದು ಪಂದ್ಯದಿಂದ ಹೊರಗಿಡುತ್ತಿತ್ತು. ಈ ನಿಯಮದ ವಿರುದ್ಧ ಕೊಂಚ ಅಪಸ್ವರ ಕೇಳಿಬಂದಿತು. ಇದರ ಬೆನ್ನಲ್ಲೇ 2025ರ ಆವೃತ್ತಿಯಿಂದ ಈ ನಿಯಮವನ್ನು ರದ್ದುಗೊಳಿಸಿ, ಕೇವಲ ಪಂದ್ಯ ಮೊತ್ತ ಮತ್ತು ಭಾರೀ ದಂಡವನ್ನು ವಿಧಿಸುವ ನಿಯಮವನ್ನು ಮಾತ್ರ ಇದೀಗ ಬಿಸಿಸಿಐ ಪಾಲಿಸುವುದಾಗಿ ತಿಳಿಸಿದೆ,(ಏಜೆನ್ಸೀಸ್).