ಗಾಲೆ: ವೇಗಿಗಳಾದ ಜೇಮ್ಸ್ ಆಂಡರ್‌ಸನ್ (40ಕ್ಕೆ 6) ಹಾಗೂ ಮಾರ್ಕ್ ವುಡ್ (84ಕ್ಕೆ 3) ಜೋಡಿಯ ಮಾರಕ ದಾಳಿ ನಡುವೆಯೂ ಆತಿಥೇಯ ಶ್ರೀಲಂಕಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ. ಪ್ರತಿಯಾಗಿ ಇಂಗ್ಲೆಂಡ್ ನಾಯಕ ಜೋ ರೂಟ್ (67*ರನ್, 77 ಎಸೆತ, 10 ಬೌಂಡರಿ) ಬಿರುಸಿನ ಅರ್ಧಶತಕದ ನೆರವಿನಿಂದ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ. ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 4 ವಿಕೆಟ್‌ಗೆ 229 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ 381 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 2 ವಿಕೆಟ್‌ಗೆ 98 ರನ್‌ಗಳಿಸಿದ್ದು, ಇನ್ನೂ 283 ರನ್ ಹಿನ್ನಡೆಯಲ್ಲಿದೆ. ನಾಯಕ ಜೋ ರೂಟ್ ಹಾಗೂ ಜಾನಿ ಬೇರ್‌ಸ್ಟೋ (24*) ಕ್ರೀಸ್‌ನಲ್ಲಿದ್ದಾರೆ. ಲಸಿತ್ ಎಂಬುಲ್ಡೆನಿಯಾ (33ಕ್ಕೆ 2) ನೀಡಿದ ಆರಂಭಿಕ ಶಾಕ್‌ನಿಂದಾಗಿ ಇಂಗ್ಲೆಂಡ್ ತಂಡ 5 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಜೋ ರೂಟ್ ಹಾಗೂ ಬೇರ್‌ಸ್ಟೋ ಜೋಡಿ ಮುರಿಯದ 3ನೇ ವಿಕೆಟ್‌ಗೆ 93 ರನ್ ಪೇರಿಸಿದೆ.
ಇದಕ್ಕೂ ಮೊದಲು, ಕ್ರಮವಾಗಿ 107 ಮತ್ತು 19 ರನ್‌ಗಳಿಂದ ದಿನದಾಟ ಮುಂದುವರಿಸಿದ ಏಂಜಲೋ ಮ್ಯಾಥ್ಯೂಸ್ ಹಾಗೂ ಡಿಕ್‌ವೆಲ್ಲಾ ಜೋಡಿಗೆ ಆರಂಭದಲ್ಲೇ ಜೇಮ್ಸ್ ಆಂಡರ್‌ಸನ್ ಶಾಕ್ ನೀಡಿದರು. ಶತಕ ಸಾಧಕ ಮ್ಯಾಥ್ಯೂಸ್ ಶುಕ್ರವಾರದ ಮೊತ್ತಕ್ಕೆ ಕೇವಲ 2 ರನ್ ಸೇರಿಸಲಷ್ಟೇ ಶಕ್ತರಾದರು. ಬಳಿಕ ಡಿಕ್‌ವೆಲ್ಲಾ ಹಾಗೂ ದಿಲ್ರುವಾನ್ ಪೆರೇರಾ (67ರನ್, 170 ಎಸೆತ, 8 ಬೌಂಡರಿ, 1 ಸಿಕ್ಸರ್) ಜೋಡಿ 7ನೇ ವಿಕೆಟ್‌ಗೆ 89 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿತು. ಅಂತಿಮ ಹಂತದವರೆಗೂ ಕ್ರಿಸ್‌ನಲ್ಲಿ ಉಳಿದ ಪೆರೇರಾ ತಂಡದ ಮೊತ್ತವನ್ನು 380ರ ಗಡಿ ದಾಟಿಸಿದರು.
ಶ್ರೀಲಂಕಾ: 139.3 ಓವರ್‌ಗಳಲ್ಲಿ 381 (ಮ್ಯಾಥ್ಯೂಸ್ 110, ನಿರೋಶನ್ ಡಿಕ್‌ವೆಲ್ಲಾ 92, ದಿಲ್ರುವಾನ್ ಪೆರೇರಾ 67, ಆಂಡರ್‌ಸನ್ 40ಕ್ಕೆ 6, ಮಾರ್ಕ್ ವುಡ್ 84ಕ್ಕೆ 3, ಸ್ಯಾಮ್ ಕರ‌್ರನ್ 60ಕ್ಕೆ 1). ಇಂಗ್ಲೆಂಡ್: 30 ಓವರ್‌ಗಳಲ್ಲಿ 2 ವಿಕೆಟ್‌ಗೆ 98 (ಜೋ ರೂಟ್ 67*, ಜಾನಿ ಬೇರ್‌ಸ್ಟೋ 24*, ಲಸಿತ್ ಎಂಬುಲ್ಡೆನಿಯಾ 33ಕ್ಕೆ 2).
ಇದನ್ನೂ ಓದಿ: ನಶೆ ರಾಣಿಗೆ ಇಂದು ಬಿಡುಗಡೆ ಭಾಗ್ಯವಿಲ್ಲ
*ಆಂಡರ್‌ಸನ್ ಡಬಲ್ ದಾಖಲೆ
ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಉಪಖಂಡದಲ್ಲಿ 5 ವಿಕೆಟ್ ಗೊಂಚಲು ಪಡೆದ ಹಿರಿಯ ವೇಗದ ಬೌಲರ್ ಎನಿಸಿಕೊಂಡರು. 38ನೇ ವಯಸ್ಸಿನಲ್ಲಿ ಆಂಡರ್‌ಸನ್ ಈ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ 37ನೇ ವಯಸ್ಸಿನಲ್ಲಿ ಉಪಖಂಡದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು. ಅಲ್ಲದೆ, ಆಂಡರ್‌ಸನ್ 30ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ (29) ಅವರನ್ನು ಹಿಂದಿಕ್ಕಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (67) ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಬೌಲರ್ ಆಗಿದ್ದಾರೆ. ವೇಗಿಗಳ ಪೈಕಿ ರಿಚರ್ಡ್ ಹ್ಯಾಡ್ಲಿ (36) ಆಂಡರ್‌ಸನ್‌ಗಿಂತ ಮುಂದಿರುವ ಏಕೈಕ ಬೌಲರ್ ಆಗಿದ್ದಾರೆ.
*15: ಜೇಮ್ಸ್ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 15 ವರ್ಷಗಳ ಕಾಲ ಒಮ್ಮೆಯಾದರೂ 5 ವಿಕೆಟ್ ಗೊಂಚಲು ಪಡೆದ ಮೊದಲ ವೇಗದ ಬೌಲರ್ ಬೌಲರ್ ಎನಿಸಿದ್ದಾರೆ. ಅವರು 2007ರಿಂದಲೂ ಈ ಸಾಧನೆ ಮಾಡುತ್ತ ಬಂದಿದ್ದಾರೆ.