ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 49ನೇ ಶತಕ ದಾಖಲಿಸಿದ ಬೆನ್ನಲ್ಲೇ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸೇರಿದಂತೆ ಶೂಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಕೊಹ್ಲಿ ಶತಕದ ವಿಚಾರವಾಗಿ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಮಾತನಾಡಲು ನಿರಾಕರಿಸಿದ್ದು, ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೋಮವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೆಣಸಾಡಲಿದ್ದು, ಶ್ರೀಲಂಕಾ ಕೂಡ ಟೂರ್ನಿಯಿಂದ ಭಾಗಶಃ ಹೊರಬಿದ್ದಿದ್ದರೂ, ಅದಕ್ಕಿನ್ನೂ ಸೆಮಿಫೈನಲ್ಗೇರುವ ಅವಕಾಶಗಳಿವೆ. ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೆ ಶ್ರೀಲಂಕಾ ಏಳನೇ ಸ್ಥಾನದಲ್ಲಿದೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಕುಸಾಲ್ ಮೆಂಡಿಸ್ ಅವರ ಬಳಿ ವಿರಾಟ್ ಕೊಹ್ಲಿ ಶತಕದ ಬಗ್ಗೆ ಕೇಳಲಾಯಿತು, ಇದಕ್ಕೆ ಉತ್ತರಿಸಿದ ಮೆಂಡಿಸ್, ನಾನ್ಯಾಕೆ ಅವರನ್ನು ಅಭಿನಂದಿಸಬೇಕು? ಎಂಬ ಉತ್ತರ ನೀಡಿದ್ದಾರೆ. ವಿರಾಟ್ ಬಗ್ಗೆ ಕುಸಲ್ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತ ಕುಸಾಲ್ ಮೆಂಡಿಸ್ ಹೇಳಿಕೆ ಔಯರಲ್ ಆದ ಬೆನ್ನಲ್ಲೇ ಕಿಡಿಕಾರಿರುವ ಕ್ರೀಡಾಭಿಮಾನಿಗಳು ಒಂದು ತಂಡದ ನಾಯಕನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು 55ರನ್ಗಳ ಎಫೆಕ್ಟ್ ಇರಬಹುದು ಎಂದು ಟೀಕಿಸಿದ್ದಾರೆ.
ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧದ ಪಂದ್ಯವು ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಆಗಿದೆ. ವಿಶ್ವಕಪ್‌ನಲ್ಲಿ ಶ್ರೀಲಂಕಾ ತನ್ನ ಸವಾಲನ್ನು ಉಳಿಸಿಕೊಳ್ಳಬೇಕಾದರೆ, ಬಾಂಗ್ಲಾದೇಶದ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.