ನವದೆಹಲಿ: ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಜಾಕ್ ಪಾಟ್ ಹೊಡೆದಿದೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು 4 ರನ್‌ಗಳ ಅಲ್ಪ ಅಂತರದಿಂದ ಎಸ್ಆರ್ಎಚ್ ತಂಡ ಸೋತಿತ್ತು. ಆ ಬಳಿಕ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಎಸ್ಆರ್ಎಚ್, ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್‌ಗಳಿಂದ ಸೋಲಿಸಿತು. ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬ್ಬರಿಸಿದ ಬೊಬ್ಬಿರಿದ ಎಸ್ಆರ್ಎಚ್ 277 ರನ್ ಗಳಿಸುವ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ಐಪಿಎಲ್ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದರು. ಎಸ್ಆರ್ಎಚ್ ಗೆಲುವಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಸೂರ್ಯ ಕುಮಾರ್ ಯಾದವ್ ಎಸ್ಆರ್ಎಚ್ಗೆ ಅಭಿನಂದನೆ ಸಲ್ಲಿಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸೂರ್ಯಕುಮಾರ್ ಯಾದವ್ ಅವರು ಕಾಲಿನ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಮುಂಬೈ ತಂಡವನ್ನು ಯಾದವ್ ಸೇರಿಕೊಂಡಿಲ್ಲ. ಆದರೆ ಕಾಲಕಾಲಕ್ಕೆ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಬಹಿರಂಗಪಡಿಸುತ್ತಾರೆ. ರೋಹಿತ್ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದಾಗ ಯಾದವ್ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮುರಿದ ಹೃದಯದ ಎಮೋಜಿ ಶೇರ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದೀಗ ಮತ್ತೊಮ್ಮೆ ಅವರು ಅನಿರೀಕ್ಷಿತ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈ ತಂಡವು ಪಂದ್ಯದಲ್ಲಿ ಸೋತ ನಂತರ ಅವರು ಇನ್ಸ್ಟಾಗ್ರಾಂನಲ್ಲಿ ಎಸ್ಆರ್ಎಚ್ ತಂಡವನ್ನು ಅಭಿನಂದಿಸಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಶ್ರೇಷ್ಠ ಪಂದ್ಯ. ಪ್ರೇಕ್ಷಕರು ಸಂಪೂರ್ಣವಾಗಿ ಎಂಜಾಯ್ ಮಾಡಿದರು. ಸನ್ ರೈಸರ್ಸ್ ಆಟಗಾರರು ಸೂಪರ್ ಆಗಿ ಆಡಿದರು. ಮುಂಬೈ ಆಟಗಾರರು ಕೂಡ ಉತ್ತಮ ಹೋರಾಟ ನಡೆಸಿದರು. ಅಮೇಜಿಂಗ್ ಫೈಟ್" ಎಂದು ಇನ್ಸ್ಟಾಗ್ರಾಂನಲ್ಲಿ ಸೂರ್ಯಕುಮಾರ್ ಯಾದವ್ ಬರೆದುಕೊಂಡಿದ್ದಾರೆ. ಇದೀಗ ಈ ಈ ಪೋಸ್ಟ್ ವೈರಲ್ ಆಗಿದೆ.
ಅಂದಹಾಗೆ ಸೂರ್ಯಕುಮಾರ್ಗೆ ಹಾರ್ದಿಕ್ ಪಾಂಡ್ಯ ನಾಯಕತ್ವ ಇಷ್ಟವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಯಾದವ್ ಈ ರೀತಿ ಪೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಮತ್ತು ರೋಹಿತ್ ನಡುವೆ ಎರಡು ಬಣ ಸೃಷ್ಟಿಯಾಗಿದೆ. ಕೆಲವರು ಹಾರ್ದಿಕ್ ಪರ ಇದ್ದರೆ, ಇನ್ನೂ ಕೆಲವರು ರೋಹಿತ್ ಪರ ಇದ್ದಾರೆ. ಇನ್ನೂ ಸೂರ್ಯಕುಮಾರ್ಗೆ ರೋಹಿತ್ ಫೇವರಿಟ್. ಹೀಗಾಗಿ ಹಾರ್ದಿಕ್ ನಾಯಕತ್ವ ಇಷ್ಟವಿಲ್ಲ. ಸತತ ಸೋಲು ಹಾಗೂ ತೀವ್ರ ಟೀಕೆಗಳಿಂದ ಹಾರ್ದಿಕ್ ಕಂಗೆಟ್ಟಿರುವ ಸಂದರ್ಭದಲ್ಲಿ ಯಾದವ್ ಎಸ್ಆರ್ಎಚ್ ತಂಡವನ್ನು ಅಭಿನಂದಿಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇನ್ನೂ ಸೂರ್ಯಕುಮಾರ್ ಗಾಯದ ಬಗ್ಗೆ ಎನ್ ಸಿಎಯಿಂದ ಇನ್ನೂ ಸ್ಪಷ್ಟತೆ ಇಲ್ಲ. ಸೂರ್ಯ ಅಲ್ಲಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಕ್ಕರೆ ತಂಡವನ್ನು ಸೇರಿಕೊಳ್ಳುತ್ತಾರೆ. (ಏಜೆನ್ಸೀಸ್)