More

    ಕುಂದಾನಗರಿ ಅಖಾಡದಲ್ಲಿ ಮಾಜಿ ಸಿಎಂ vs ಸಚಿವೆ ಪುತ್ರ!

    ಮಂಜುನಾಥ ಕೋಳಿಗುಡ್ಡ ಬೆಳಗಾವಿ
    ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಬಂಡಾಯ ಹಾಗೂ ಲಡಾಯಿಗೆ ಹೆಸರಾದ ಜಿಲ್ಲೆ ಬೆಳಗಾವಿ. ಇಲ್ಲಿನ ರಾಜಕೀಯ ನಾಯಕರು ಕಾಲಕಾಲಕ್ಕೆ ಭಿನ್ನಾಭಿಪ್ರಾಯ, ಸಿಟ್ಟು-ಸೆಡವು ಹೊರಹಾಕುತ್ತಲೇ ರಾಜಕೀಯ ಭವಿಷ್ಯ ಭದ್ರ ಮಾಡಿಕೊಳ್ಳಲು ಹವಣಿಸುವುದು ಗುಟ್ಟಾಗಿ ಉಳಿದಿಲ್ಲ. ಕುಟುಂಬ ಹಾಗೂ ಹೊಂದಾಣಿಕೆ ರಾಜಕಾರಣದ ಹೊಳೆಯಲ್ಲಿ ಮಿಂದೇಳುವ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಗ್ನಿ ಪರೀಕ್ಷೆಗಿಳಿದಿದ್ದಾರೆ.

    ಕಾಂಗ್ರೆಸ್ ರಾಜಕೀಯವಾಗಿ ಭದ್ರವಾಗಿರುವ ಹಾಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿಯು ಜಿಲ್ಲೆಯ ಹೊರಗಿನವರಾದ ಮಾಜಿ ಸಿಎಂ ಜಗದೀಶ ಶೆಟ್ಟರ್​ಗೆ ಮಣೆ ಹಾಕಿದೆ. ಶೆಟ್ಟರ್​ಗೆ ಟಿಕೆಟ್ ಕೊಟ್ಟರೆ ಹಾದಿ ಸುಲಭವಾಗಲಿದೆ ಎಂದು ಎಣಿಸಿದ್ದ ಕೈ ನಾಯಕರಿಗೆ ಈಗ ಶಾಕ್ ನೀಡಿದಂತಾಗಿದೆ. ಎರಡೇ ದಿನದಲ್ಲಿ ಅಖಾಡ ತನ್ನ ‘ಮುಖವಾಡ’ ಬದಲಿಸಿ, ಶೆಟ್ಟರ್ ವಿರೋಧಿಸುತ್ತಿದ್ದ ಸ್ವಪಕ್ಷೀ ಯರೇ ಈಗ ದೊಡ್ಡ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ಹೊರುವಂತಾಗಿದೆ. ಎರಡೂ ಪಕ್ಷಗಳು ಪ್ರಬಲ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು, ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಜತೆಗೆ ರಾಷ್ಟ್ರೀಯತೆ, ಹಿಂದುತ್ವಕ್ಕೆ ಹೆಚ್ಚು ಮನ್ನಣೆ ಸಿಗುತ್ತಿದೆ. ಹಾಗಾಗಿಯೇ ಬಿಜೆಪಿ ಹಿಂದುತ್ವದ ಆಧಾರದ ಮೇಲೆ 2004 ರಿಂದ 2021ರ ಉಪಚುನಾವಣೆವರೆಗೂ ನಿರಂತರವಾಗಿ ಗೆಲುವು ಸಾಧಿಸಿಕೊಂಡು ಬಂದಿದೆ.

    ಹಾಲಿ ಸಂಸದೆ ಮಂಗಲ ಅಂಗಡಿ ಕಾರಣಾಂತರಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಸ್ಥಳೀಯರ ಪರ-ವಿರೋಧದ ನಡುವೆಯೂ ಜಗದೀಶ ಶೆಟ್ಟರ್​ಗೆ ಬಿಜೆಪಿ ಮಣೆ ಹಾಕಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್ ಕ್ಷೇತ್ರದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಲಸಿಗ ಅಪವಾದ ಅಳಿಸಿಹಾಕುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅಲ್ಲದೆ, ತಮ್ಮ ಆಪ್ತರ ಮೂಲಕ ಕ್ರಿಶ್ಚಿಯನ್, ಮುಸ್ಲಿಂ ಸೇರಿ ಅಲ್ಪಸಂಖ್ಯಾತ ಮುಖಂಡರನ್ನು ಸಂರ್ಪಸಲು ಪ್ರಯತ್ನಿಸುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಒಟ್ಟೊಟ್ಟಿಗೆ ಪ್ರಚಾರ ಕೈಗೊಂಡಿದ್ದು, ಮರಾಠಿ ಮತದಾರರನ್ನು ಸೆಳೆಯಲು ಹಿಂದುತ್ವದ ಮೊರೆ ಹೋಗಿದ್ದಾರೆ. ಪ್ರಚಾರದಲ್ಲಿ ಭಗವಾ ಧ್ವಜಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮೂಲಕ ಮೃದು ಹಿಂದುತ್ವ ಅನುಸರಿಸುತ್ತಿರುವುದು ಕುತೂಹಲ ಹೆಚ್ಚಿಸಿದೆ.

    ಅಭ್ಯರ್ಥಿಗಳ ಪ್ಲಸ್-ಮೈನಸ್: ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್​ಗೆ ಬೆಳಗಾವಿ ಕ್ಷೇತ್ರ ಪರಿಚಯದ ಜತೆಗೆ ಸಂಘಟನೆಯ ಬಲವಿದೆ. ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ಹಾಗೂ ಸರಳ, ಸೌಮ್ಯ ಸ್ವಭಾವದ ವ್ಯಕ್ತಿ ಎಂಬ ಅಭಿಪ್ರಾಯ ಮತದಾರರಲ್ಲಿದೆ. ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠ ಸಂಘಟನೆ, ಪ್ರಧಾನಿ ಮೋದಿ, ಯಡಿಯೂರಪ್ಪ ನಾಮಬಲ ಪ್ಲಸ್ ಪಾಯಿಂಟ್. ಕ್ಷೇತ್ರಕ್ಕೆ ವಲಸಿಗನೆಂಬುದು ವಿರೋಧಿಗಳಿಗೆ ಅಸ್ತ್ರವಾಗಿದ್ದು, ಪಕ್ಷದ ಸ್ಥಳೀಯ ನಾಯಕರಲ್ಲಿ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ. ಪಂಚಮಸಾಲಿ ಮತಗಳು ಕೈತಪ್ಪುವ ಆತಂಕವೂ ಇದೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್​ಗೆ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಿರುವುದು ದೊಡ್ಡ ಪ್ಲಸ್ ಪಾಯಿಂಟ್. ಅಹಿಂದ, ಪಂಚಮಸಾಲಿ ಮತ ಕೈಹಿಡಿಯುವ ವಿಶ್ವಾಸ, ಸಚಿವರು, ಪಕ್ಷದ ಶಾಸಕರ ಬಲದ ಜತೆಗೆ ಕಾಂಗ್ರೆಸ್ ಗ್ಯಾರಂಟಿಗಳು ಭರವಸೆ ಹೆಚ್ಚಿಸಿವೆ. ಕಾರ್ಯಕರ್ತರೊಂದಿಗೆ ಮೃಣಾಲ್ ಒಡನಾಟ ಅಷ್ಟಕ್ಕಷ್ಟೇ. ಚುನಾವಣೆ ತಂತ್ರಗಾರಿಕೆಯಲ್ಲಿ ಹಿನ್ನಡೆ, ರಾಜಕೀಯದಲ್ಲಿ ಅನುಭವದ ಕೊರತೆ, ಪಕ್ಷದಲ್ಲಿ ನಾಯಕರ ವೈಮನಸ್ಸು, ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲದಿರುವುದು ಮೈನಸ್ ಪಾಯಿಂಟ್.

    ಲಿಂಗಾಯತರದ್ದೇ ಪ್ರಾಬಲ್ಯ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ 1957ರಲ್ಲಿ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಬಿ.ಎನ್.ದಾತಾರ್ ಪಕ್ಷದ ಗೆಲುವಿಗೆ ಮುನ್ನುಡಿ ಬರೆದರು. ಇಲ್ಲಿಂದ 1996ರ ವರೆಗೆ ಸತತ 11 ಬಾರಿ ಕಾಂಗ್ರೆಸ್ ಗೆದ್ದಿದೆ. ಅದರಲ್ಲಿ ಎಸ್.ಬಿ.ಸಿದ್ನಾಳ್ (1980 ರಿಂದ 1991) ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. 1996ರಲ್ಲಿ ಒಮ್ಮೆ ಜನತಾದಳ ಗೆದ್ದರೆ 1998ರಲ್ಲಿ ರೈತ ನಾಯಕ ಬಾಬಾಗೌಡ ಪಾಟೀಲ ರೈತ ಸಂಘದಿಂದ ವಿಜಯಿಯಾಗಿದ್ದರು. 1999ರಲ್ಲಿ ಕಾಂಗ್ರೆಸ್​ನಿಂದ ಅಮರಸಿಂಹ ಪಾಟೀಲ ಗೆದ್ದಿದ್ದರು. 2004ರಿಂದ 2019ರ ವರೆಗೆ ಸತತ ನಾಲ್ಕು ಬಾರಿ ಸುರೇಶ ಅಂಗಡಿ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ಅಗಲಿಕೆ ನಂತರ ನಡೆದ 2021ರ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಪತ್ನಿ ಮಂಗಲ ಅಂಗಡಿ 5,240 ಮತಗಳ ಅಂತರದಿಂದ ಸತೀಶ್ ಜಾರಕಿಹೊಳಿ ವಿರುದ್ಧ ಗೆಲುವು ದಾಖಲಿಸಿದ್ದರು. ಕ್ಷೇತ್ರದಲ್ಲಿ 1957ರಿಂದ 2021ರ ವರೆಗೆ ನಡೆದ 18 ಚುನಾವಣೆಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದವರೇ ಗೆಲುವು ಸಾಧಿಸುವ ಮೂಲಕ ಕ್ಷೇತ್ರ ಕೈತಪ್ಪದಂತೆ ನೋಡಿಕೊಂಡಿದ್ದಾರೆ.

    ಮರಾಠಿ ಮತಗಳು ನಿರ್ಣಾಯಕ: ಕ್ಷೇತ್ರದಲ್ಲಿ ವೀರಶೈವ- ಲಿಂಗಾಯತ, ಕುರುಬ ಜನಸಂಖ್ಯೆ ಸಮಬಲ ಇದ್ದು, ಮರಾಠಿಗರ ಮತಗಳು ನಿರ್ಣಾಯಕ ಎನಿಸಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಹಿಂದ ವರ್ಗದ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಪುರುಷ- 9,48,282 , ಮಹಿಳೆ-9,55,725, ಇತರ 92 ಸೇರಿ ಒಟ್ಟು 19,04,099 ಜನರು ಮತ ಚಲಾವಣೆ ಹಕ್ಕು ಹೊಂದಿದ್ದಾರೆ.

    ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ಕರ್ಮಭೂಮಿ. ಕಾಂಗ್ರೆಸ್ ಅಭ್ಯರ್ಥಿ ಯುವಕನೆಂದು ನಿರ್ಲಕ್ಷಿಸುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆ ಎದುರಿಸುತ್ತೇನೆ.

    | ಜಗದೀಶ ಶೆಟ್ಟರ್ ಬಿಜೆಪಿ ಅಭ್ಯರ್ಥಿ

    ಯುವಕರೇ ದೇಶದ ಆಸ್ತಿ, ಭವಿಷ್ಯ ಎಂದು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ನನಗೊಂದು ಸುವರ್ಣಾವಕಾಶ ಸಿಕ್ಕಿದ್ದು, ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿ ಗೆಲ್ಲಿಸಲಿದ್ದಾರೆ.

    | ಮೃಣಾಲ್ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts