ಕ್ರೀಡೆ

ದಿನಾಂಕ ಬದಲಾವಣೆ ಬಳಿಕ ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿಯ ಸಮಯವೂ ಬದಲು

ಕೊಲಂಬೊ: ಕರೊನಾ ಹಾವಳಿಯಿಂದಾಗಿ ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಸೀಮಿತ ಓವರ್ ಕ್ರಿಕೆಟ್ ಸರಣಿಯ ಪಂದ್ಯಗಳ ದಿನಾಂಕ ಬದಲಾವಣೆಯಾದ ಬೆನ್ನಲ್ಲೇ ಇದೀಗ ಸಮಯವನ್ನೂ ಬದಲಾವಣೆ ಮಾಡಲಾಗಿದೆ.

ಭಾನುವಾರದಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿ ಮಧ್ಯಾಹ್ನ 2.30ಕ್ಕೆ ಬದಲಾಗಿ 3 ಗಂಟೆಗೆ ಆರಂಭಗೊಳ್ಳಲಿದೆ. ಜುಲೈ 25ರಿಂದ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿ ರಾತ್ರಿ 7 ಗಂಟೆಗೆ ಬದಲಾಗಿ 8 ಗಂಟೆಗೆ ಆರಂಭಗೊಳ್ಳಲಿದೆ. ಪ್ರವಾಸದ ಎಲ್ಲ 6 ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಂದ್ಯಗಳು ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಕಾಣಲಿವೆ.

ಧವನ್ ಪಡೆ ಕಠಿಣ ಅಭ್ಯಾಸ

ಲಂಕಾ ವಿರುದ್ಧದ ಸರಣಿ 5 ದಿನಗಳಿಗೆ ಮುಂದೂಡಿಕೆಯಾಗಿರುವ ನಡುವೆ ಶಿಖರ್ ಧವನ್ ಸಾರಥ್ಯದ ಭಾರತ ತಂಡ ಕೊಲಂಬೊದಲ್ಲಿ ಕಠಿಣ ಅಭ್ಯಾಸ ಮುಂದುವರಿಸಿದೆ. ತಂಡದ ತರಬೇತಿ ಅವಧಿಯ ವಿಡಿಯೋವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಮತ್ತೊಂದೆಡೆ ಲಂಕಾ ಕ್ರಿಕೆಟಿಗರು ಸೋಮವಾರ ಸರಣಿಯ ಬಯೋಬಬಲ್ ಪ್ರವೇಶಿಸಿದ್ದು, ಮಂಗಳವಾರದಿಂದ ಅಭ್ಯಾಸ ನಡೆಸುವ ನಿರೀಕ್ಷೆ ಇದೆ.