ಕ್ರೀಡೆ

ಭಾರತ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳಲು ಈತ ಸಿದ್ಧನಿದ್ದಾನೆ ಎಂದ ಮೊಹಮ್ಮದ್ ಕೈಫ್| Mohammad Kaif

Mohammad Kaif: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡು ಅದ್ಭುತ ಪ್ರದರ್ಶನ ನೀಡಿರುವ ಶುಭ್‌ಮಾನ್ ಗಿಲ್, ರೋಹಿತ್ ಶರ್ಮಾ ನಂತರ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೈಫ್,  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ರಂತಹ ಹಿರಿಯ ಆಟಗಾರರ ನಿವೃತ್ತಿಯ ನಂತರ , ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ಗಿಲ್ ಯುವ ತಂಡವನ್ನು ಮುನ್ನಡೆಸಿ ಸರಣಿಯನ್ನು ಸಮಬಲಗೊಳಿಸಿರುವುದು ಸಾಮಾನ್ಯ ಸಂಗತಿಯಲ್ಲ, ಅಷ್ಟೆ ಅಲ್ಲ ಈ ರೀತಿಯ ಫಲಿತಾಂಶದ ಬಗ್ಗೆ ಯಾರು ನಿರೀಕ್ಷೆ ಕೂಡ ಮಾಡಿರಲಿಲ್ಲ ಎಂದರು.

ಗಿಲ್ ತುಂಬಾ ಶಾಂತ ಸ್ವಭಾವದವರಾಗಿದ್ದು, ಒತ್ತಡದ ಸಂದರ್ಭ ಎದುರಾದಾಗಲೂ ಶಾಂತಚಿತ್ತದಿಂದ ನಿಭಾಯಿಸಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಎಷ್ಟು ದಿನ ಮುಂದುವರಿಯುತ್ತಾರೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಯುವ ಆಟಗಾರ ಇತ್ತೀಚಿನ ಟೆಸ್ಟ್‌ ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವುದಷ್ಟೆ ಅಲ್ಲದೆ, ಬ್ಯಾಟಿಂಗ್​ನಲ್ಲಿಯು ಅದ್ಬುತ ಪ್ರದರ್ಶನ ನೀಡಿದ್ದಾರೆ, ಆದ್ದರಿಂದ ಗಿಲ್ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.

ಶುಭ್‌ಮಾನ್ ಗಿಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹತ್ತು ಇನ್ನಿಂಗ್ಸ್‌ಗಳಿಂದ 75.4 ಸರಾಸರಿಯಲ್ಲಿ 754 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಸೇರಿವೆ. (ಏಜೆನ್ಸೀಸ್)