ಮ್ಯಾಂಚೆಸ್ಟರ್: ಮಾಜಿ ನಾಯಕ ಸರ್ಫಾಜ್ ಅಹಮದ್ ಅವರಿಗೆ ತಂಡದಲ್ಲಿ ಸೂಕ್ತ ಸ್ಥಾನಮಾನ ನೀಡದೆ, ಅಗೌರವದಿಂದ ಕಾಣಲಾಗುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಆಟಗಾರರು ಆರೋಪಿಸಿದ್ದಾರೆ. ತಂಡದ ಬ್ಯಾಟಿಂಗ್ ವೇಳೆ ಇನಿಂಗ್ಸ್ನ 71ನೇ ಓವರ್ನಲ್ಲಿ ಸಹ ಆಟಗಾರ ಶಾಬಾದ್ ಖಾನ್ಗೆ ಸರ್ಫಾಜ್ ಶೂ ತಂದುಕೊಟ್ಟಿದ್ದು ಹಿರಿಯ ಆಟಗಾರರಾದ ಶೋಯಿಬ್ ಅಖ್ತರ್ ಹಾಗೂ ರಶೀದ್ ಲತೀಫ್ ಕೆಂಗಣ್ಣಿಗೆ ಗುರಿಯಾಗಿದೆ. 4 ವರ್ಷ ರಾಷ್ಟ್ರೀಯ ತಂಡ ಮುನ್ನಡೆಸಿರುವ ಆಟಗಾರನನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ಬಳಿಕ ಸರ್ಫಾಜ್ ಅಹಮದ್ 4 ವರ್ಷಗಳ ಕಾಲ ಪಾಕ್ ತಂಡಕ್ಕೆ ನಾಯಕನಾಗಿದ್ದರು, ಇವರ ನಾಯಕತ್ವದಲ್ಲೇ ಪಾಕ್ ತಂಡ 2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಷಿಪ್ ಟ್ರೋಫಿ ಜಯಿಸಿತ್ತು.
ಕರಾಚಿ ಹುಡುಗನನ್ನು ಈ ರೀತಿ ನಡೆಸಿಕೊಂಡಿದ್ದು, ಸರಿಯಲ್ಲ. ಇದು ನಿಜವಾಗಿಯೂ ತಪ್ಪು. ನಾಲ್ಕೂ ವರ್ಷ ಪಾಕಿಸ್ತಾನ ತಂಡ ಮುನ್ನಡೆಸಿದ ಆಟಗಾರನಿಗೆ ಈ ರೀತಿ ಕೆಲಸ ಹೇಳುವುದು ಎಷ್ಟು ಸರಿ ಎಂದು ಅಖ್ತರ್ ಪ್ರಶ್ನಿಸಿದ್ದಾರೆ. ಒಂದು ವೇಳೆ ಸರ್ಫಾಜ್ ಅವರಾಗಿಯೇ ಇಂಥ ಕೆಲಸ ಮಾಡಿದರೂ ಅದನ್ನು ತಡೆಯಬೇಕು. ಅವರಿಂದ ಇಂಥ ಕೆಲ ಮಾಡಿಸುವುದು ಸರಿಯಲ್ಲ ಎಂದು ಅಖ್ತರ್ ಪಾಕಿಸ್ತಾನ ಮಿಡಿಯಾಗೆ ಹೇಳಿದ್ದಾರೆ. ಮೈದಾನಕ್ಕೆ ಶೂ ತೆಗೆದುಕೊಂಡು ಹೋಗಿ ಕೊಡುವುದು ತಪ್ಪಲ್ಲ. ಆದರೆ, ಒಬ್ಬ ಮಾಜಿ ನಾಯಕ ಕೊಡುವುದು ತಪ್ಪು ಎಂದಿದ್ದಾರೆ. ಇದಕ್ಕೆ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಕೂಡ ಧ್ವನಿಗೂಡಿಸಿದ್ದಾರೆ.
ಮಾಜಿ ಆಟಗಾರರ ಟೀಕೆಗೆ ಪ್ರತಿಕ್ರಿಯಿಸಿರುವ ಕೋಚ್ ಮಿಸ್ಬಾ ಉಲ್ ಹಕ್, ಸರ್ಫಾಜ್ ಶೂ ತೆಗೆದುಕೊಂಡು ಹೋಗಿ ಕೊಟ್ಟಿರುವುದು ಅಗೌರವ ಸೂಚಕವಲ್ಲ. ಅವರೊಬ್ಬ ಉತ್ತಮ ಮನುಷ್ಯತ್ವ ಇರುವ ಆಟಗಾರ ಎಂದಿದ್ದಾರೆ. ಇದನ್ನೆ ಅಗೌರವ ಎಂದು ಭಾವಿಸುವುದು ತಪ್ಪು ಎಂದಿದ್ದಾರೆ. ಸರ್ಫಾಜ್ ಅಹಮದ್ 4 ವರ್ಷಗಳ ಕಾಲ ಪಾಕ್ ತಂಡಕ್ಕೆ ನಾಯಕರಾಗಿದ್ದರು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕನಿಷ್ಠ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಬಳಿಕ ಅಜರ್ ಅಲಿ ಅವರನ್ನು ಟೆಸ್ಟ್ ತಂಡಕ್ಕೆ, ಬಾಬರ್ ಅಜಮ್ ಅವರನ್ನು ಏಕದಿನ, ಟಿ20 ತಂಡಕ್ಕೆ ನಾಯಕನಾಗಿ ನೇಮಿಸಲಾಗಿದೆ.