ಕ್ರೀಡೆ

VIDEO | ಮಗನಿಗೆ ಕುದುರೆ ಸವಾರಿ ಕಲಿಸಿದ ಶಿಖರ್​ ಧವನ್​!

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ವಿವಿಧ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜತೆಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬಂದಿರುವ ಟೀಮ್​ ಇಂಡಿಯಾದ ಎಡಗೈ ಆರಂಭಿಕ ಶಿಖರ್​ ಧವನ್​ ಮತ್ತೊಮ್ಮೆ ಗಮನಸೆಳೆದಿದ್ದಾರೆ. ಈ ಬಾರಿ ಅವರು ಸರಾಗವಾಗಿ ಕುದುರೆ ಸವಾರಿ ಮಾಡಿದ್ದಲ್ಲದೆ, ಕುದುರೆ ಸವಾರಿಯನ್ನು ಮಗನಿಗೂ ಕಲಿಸಿಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಗ ಜೊರಾವರ್​ಗೆ ಶಿಖರ್​ ಧವನ್​ ಕುದುರೆ ಸವಾರಿಯ ಪಾಠಗಳನ್ನು ಹೇಳಿಕೊಡುತ್ತಿರುವ ವಿಡಿಯೋ ಈಗ ವೈರಲ್​ ಆಗಿದೆ. ಮೊದಲಿಗೆ ತಾವೇ ಕುದುರೆ ಸವಾರಿ ಮಾಡಿರುವ ಧವನ್​, ಬಳಿಕ ಮಗನನ್ನೂ ಕುದುರೆ ಮೇಲೆ ಕುಳಿತುಕೊಳ್ಳಿಸಿದ್ದಾರೆ. ಕುದುರೆ ಜತೆಜತೆಯಲ್ಲೇ ಧವನ್​ ಕೂಡ ಓಡಿದ್ದಾರೆ. ಧವನ್​ ಮತ್ತು ಮಗನ ಕುದುರೆ ಸವಾರಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕುದುರೆ ಸವಾರಿಯ ಆನಂದವನ್ನು ಜೊರಾವರ್​ಗೂ ಕಲಿಸುತ್ತಿದ್ದೇನೆ. ನಮ್ಮ ಹೊಸ ಗೆಳೆಯನ ಜತೆಗೆ ಕಳೆದ ಸಮಯವನ್ನು ಅವನೂ ಆನಂದಿಸಿದ್ದಾನೆ ಎಂದು ಶಿಖರ್​ ಧವನ್​ ಟ್ವಿಟರ್​ನಲ್ಲಿ ಬರೆದಿದ್ದಾರೆ. ಶಿಖರ್​ ಧವನ್​ ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ವಿರುದ್ಧ ಏಕದಿನ ಸರಣಿ ಆಡಿದ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ. ಗಾಯದಿಂದಾಗಿ ನ್ಯೂಜಿಲೆಂಡ್​ ಪ್ರವಾಸದಿಂದ ಹೊರಗುಳಿದಿದ್ದರೆ, ದಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಆಡಲು ಸಿದ್ಧರಾದಾಗ ಕರೊನಾ ಹಾವಳಿಯಿಂದಾಗಿ ಸರಣಿ ಮೊಟಕುಗೊಂಡಿತ್ತು.