ಕ್ರೀಡೆ

ಮೈದಾನದಲ್ಲೇ ದುರ್ವರ್ತನೆ... ಪಾಕ್​ ಪ್ಲೇಯರ್​ನಿಂದ ಅನುಭವಿಸಿದ ಕಹಿ ಅನುಭವ ಬಿಚ್ಚಿಟ್ಟ ಮಿಥಾಲಿ ರಾಜ್​! Mithali Raj

Mithali Raj : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಸಾಕು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳು ಗಗನಕ್ಕೇರುತ್ತವೆ. ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಮುಖಾಮುಖಿಯಾದಾಗ ಉಭಯ ದೇಶಗಳ ಅಭಿಮಾನಿಗಳೇ ಪರಸ್ಪರ ಸ್ಪರ್ಧೆಗೆ ಇಳಿದಂತೆ ಭಾವಿಸುತ್ತಾರೆ. ಪಂದ್ಯದ ವೇಳೆ ಮೈದಾನದಲ್ಲಿ ನೇರವಾಗಿ ಹೋರಾಟ ನಡೆಸುವ ಕ್ರಿಕೆಟಿಗರು ಒಂದು ರೀತಿಯ ಭಾವನಾತ್ಮಕ ಯುದ್ಧದ ಸ್ಥಿತಿಯಲ್ಲಿರುತ್ತಾರೆ. ಏಕೆಂದರೆ, ಅವರು ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಇರುತ್ತಾರೆ.

ಒತ್ತಡದಂತಹ ಕಠಿಣ ಸಂದರ್ಭಗಳಲ್ಲಿಯೂ ಕ್ರೀಡಾ ಮನೋಭಾವ ಪ್ರದರ್ಶಿಸುವವರನ್ನು ನಿಜವಾದ ಆಟಗಾರೆಂದು ಪರಿಗಣಿಸಲಾಗುತ್ತದೆ. ಭಾರತೀಯ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಕೂಡ ಈ ವರ್ಗಕ್ಕೆ ಸೇರುತ್ತಾರೆ. ಏಕೆಂದರೆ, ಪಾಕಿಸ್ತಾನಿ ಮಹಿಳಾ ತಂಡದ ವಿರುದ್ಧದ ಪಂದ್ಯದ ಸಮಯದಲ್ಲಿ, ಎದುರಾಳಿ ತಂಡದ ಆಟಗಾರ್ತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದಾಗಲೂ ಮಿಥಾಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಇತ್ತೀಚೆಗೆ ದಿ ಲಾಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಮಿಥಾಲಿ ಅವರು ತಮ್ಮ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ನಾವು ಟಿ20 ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡುತ್ತಿದ್ದೆವು. ನಾನು ಆ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಅದೇ ವೇಳೆ ಪಾಕಿಸ್ತಾನಿ ಮಹಿಳಾ ಕ್ರಿಕೆಟಿಗರೊಬ್ಬರು ಮೈದಾನದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಅವಳು ಏಕೆ ಹಾಗೆ ಮಾಡುತ್ತಾಳೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಪೆವಿಲಿಯನ್‌ಗೆ ಹೋಗುತ್ತಿದ್ದಾಗಲೂ ಆಕೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಳು. ಆಗಲೂ ಆಕೆ ನನ್ನನ್ನು ನಿಂದಿಸುತ್ತಿದ್ದಳು. ಆದರೆ ನಾನು ಪ್ರತೀಕಾರ ತೀರಿಸಿಕೊಳ್ಳಲು ಬಯಸಲಿಲ್ಲ.

ಪಂದ್ಯದ ಬಳಿಕ ಕೈಕುಲುಕುವಾಗಲೂ ನನ್ನ ಭುಜಕ್ಕೆ ಆಕೆ ಹೊಡೆದಳು. ನಾನು ಈ ಬಗ್ಗೆ ನನ್ನ ಮ್ಯಾನೇಜರ್‌ಗೆ ಹೇಳಿದೆ. ತಕ್ಷಣ ಅವರು ಮ್ಯಾಚ್ ರೆಫರಿಯ ಗಮನಕ್ಕೆ ತಂದರು. ಇದು ಹೈ ವೋಲ್ಟೇಜ್ ಪಂದ್ಯವಾಗಿರುವುದರಿಂದ ಇಂತಹ ಘಟನೆ ಸಾಮಾನ್ಯವಾಗಿರುತ್ತವೆ ಎಂದು ರೆಫರಿ ಹೇಳಿದರು ಎಂದು ಮಿಥಾಲಿ ಅವರು ತಿಳಿಸಿದ್ದಾರೆ.

ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರು

ನಾನು ಈ ವಿಷಯವನ್ನು ಪಾಕಿಸ್ತಾನ ತಂಡದ ನಿರ್ವಹಣೆಯ ಗಮನಕ್ಕೂ ತರಲು ನಿರ್ಧರಿಸಿದೆ. ಆದರೆ, ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು ನನ್ನಲ್ಲಿ ಕ್ಷಮೆಯಾಚಿಸಿದಳು. ಹೀಗಾಗಿ ಆ ವಿವಾದವನ್ನು ಅಲ್ಲಿಯೇ ಬಿಟ್ಟೆ. ನೀವು ಆಟದಲ್ಲಿ ಸ್ಪರ್ಧಿಸಬೇಕೇ ಹೊರತು ಯಾವುದೇ ಕಾರಣವಿಲ್ಲದೆ ಇತರರನ್ನು ಟೀಕಿಸುವುದು ಸರಿಯಲ್ಲ ಎಂದು ಮಿಥಾಲಿ ರಾಜ್ ಹೇಳಿದರು.

ಅಂದಹಾಗೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಸೇವೆ ಸಲ್ಲಿಸಿದ ಮಿಥಾಲಿ ರಾಜ್, 232 ಏಕದಿನ, 12 ಟೆಸ್ಟ್ ಮತ್ತು 89 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 699 ರನ್ ಗಳಿಸಿರುವ ಈ ಹೈದರಾಬಾದ್ ಆಟಗಾರ್ತಿ ಏಳು ಶತಕಗಳ ಸಹಾಯದಿಂದ ಏಕದಿನ ಪಂದ್ಯಗಳಲ್ಲಿ 7805 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ, 17 ಅರ್ಧಶತಕಗಳೊಂದಿಗೆ 2364 ರನ್ ಗಳಿಸಿದ್ದಾರೆ. (ಏಜೆನ್ಸೀಸ್​)