ಕ್ರೀಡೆ

ಶಕೀಬ್​ ಅಲ್​ ಹಸನ್​ಗೆ ಶಾಕ್​ ಕೊಟ್ಟ ಐಸಿಸಿ! ಇನ್ಮುಂದೆ ಬಾಂಗ್ಲಾ ಆಲ್​ರೌಂಡರ್​ ಬೌಲಿಂಗ್​ ಮಾಡುವಂತಿಲ್ಲ | Shakib Al Hasan

Shakib Al Hasan : ಬಾಂಗ್ಲಾದೇಶದ ದಿಗ್ಗಜ ಆಲ್‌ರೌಂಡರ್ ಶಕೀಬ್ ಅಲ್ ಹಸನ್​ಗೆ ಸರಣಿ ಆಘಾತಗಳು ಎದುರಾಗಿವೆ. ಈ ಹಿಂದೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಶಕೀಬ್‌ಗೆ ಬೌಲಿಂಗ್‌ನಿಂದ ನಿಷೇಧ ಹೇರಿತ್ತು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ನಿಷೇಧ ಹೇರಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ದೇಶೀಯ ಮತ್ತು ವಿದೇಶಿ ಕ್ರಿಕೆಟ್​ ಮಂಡಗಳಿಗಳ ಯಾವುದೇ ಲೀಗ್‌ಗಳಲ್ಲಿ ಬೌಲಿಂಗ್ ಮಾಡುವುದನ್ನು ಐಸಿಸಿ ನಿಷೇಧಿಸಿದೆ. ಈ ಸಂಬಂಧ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಇಂದು ಹೇಳಿಕೆ ನೀಡಿದ್ದು, ಶಕೀಬ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟರ್ ಆಗಿ ಮಾತ್ರ ಮುಂದುವರಿಯಬಹುದಾಗಿದೆ. ಆದರೆ, ಶಕೀಬ್​ ಬ್ಯಾನ್​ ಆಗಿರುವುದರಿಂದ ಚಾಂಪಿಯನ್ಸ್​ ಟ್ರೋಫಿ-2025ಗೂ ಮುನ್ನವೇ ಬಾಂಗ್ಲಾ ತಂಡಕ್ಕೆ ಬಿಗ್​ ಶಾಕ್​ ಎದುರಾಗಿದೆ.

ನಮ್ಮ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಬೌಲಿಂಗ್ ಮಾಡಲು ನಿಷೇಧಿಸಿರುವುದಾಗಿ ಐಸಿಸಿ ನಮಗೆ ತಿಳಿಸಿದೆ. ಇಸಿಬಿ ತನಿಖೆಯ ನಂತರ ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶಕೀಬ್ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ವಿದೇಶದಲ್ಲಿ ಯಾವುದೇ ಲೀಗ್‌ಗಳಲ್ಲಿ ಬೌಲಿಂಗ್ ಮಾಡುವಂತಿಲ್ಲ. ಬ್ಯಾಟಿಂಗ್​ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಕೌಂಟಿ ಪಂದ್ಯವೊಂದರಲ್ಲಿ ಶಕೀಬ್ ಅಲ್ ಹಸನ್ ಅವರ ಬೌಲಿಂಗ್ ಆಕ್ಷನ್​ ಬಗ್ಗೆ ದೂರುಗಳು ಬಂದ ನಂತರ ಇಸಿಬಿ ಅವರನ್ನು ಪರೀಕ್ಷೆ ಮಾಡಿತು. ಶಕೀಬ್ ಅವರ ಮೊಣಕೈ 15 ಡಿಗ್ರಿಗಿಂತ ಹೆಚ್ಚು ಬಾಗಿರುವುದು ಪತ್ತೆಯಾಗಿದೆ. ಹೀಗಾಗಿ ಐಸಿಸಿ ಅವರನ್ನು ಅಮಾನತುಗೊಳಿಸಿದೆ. ಶೀಘ್ರದಲ್ಲೇ ಶಕೀಬ್​ ಅವರು ಮತ್ತೊಮ್ಮೆ ಪರೀಕ್ಷೆ ಎದುರಿಸಲಿದ್ದಾರೆ ಎಂದು ಬಿಸಿಬಿ ಮಾಹಿತಿ ನೀಡಿದೆ.

ಅಂದಹಾಗೆ ಶಕೀಬ್ ಅಲ್ ಹಸನ್ ಅವರು ಕೆಲವು ತಿಂಗಳ ಹಿಂದಷ್ಟೇ ಟಿ20 ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಶಕೀಬ್ ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ. ಇತ್ತೀಚೆಗೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ಶಕೀಬ್ ಅವರು ತಮ್ಮ ಕೊನೆಯ ಟೆಸ್ಟ್ ಅನ್ನು ತವರಿನಲ್ಲಿ ಆಡಲು ಬಯಸುವುದಾಗಿ ಹೇಳಿದರು. ಆದರೆ, ಬಾಂಗ್ಲಾದೇಶದಲ್ಲಿ ನಡೆದ ಗಲಭೆಯಿಂದಾಗಿ ಅವರು ಮಿರ್‌ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವಿದಾಯ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

ಇನ್ನು ಉತ್ತಮ ಫಾರ್ಮ್‌ನಲ್ಲಿಲ್ಲದ ಶಕೀಬ್ ಅವರನ್ನು ಬಿಸಿಬಿ ಮ್ಯಾನೇಜ್‌ಮೆಂಟ್ ಏಕದಿನ ತಂಡದಿಂದ ಹೊರಗಿಟ್ಟಿದೆ. ಇದೀಗ, ಅವರ ಬೌಲಿಂಗ್ ಆಕ್ಷನ್ ಅನ್ನು ನಿಷೇಧಿಸುವುದರೊಂದಿಗೆ, ಅವರ ವೃತ್ತಿಜೀವನವು ಬಹುತೇಕ ಮುಗಿದಂತಾಗಿದೆ. 37 ವರ್ಷ ವಯಸ್ಸಿನ ಶಕೀಬ್​, ಪ್ರಸ್ತುತ ಲಂಕಾ ಟಿ10 ಲೀಗ್‌ನಲ್ಲಿ ಗಾಲೆ ಮಾರ್ವೆಲ್ಸ್‌ಗಾಗಿ ಆಡುತ್ತಿದ್ದಾರೆ. (ಏಜೆನ್ಸೀಸ್​)