ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಶ್ಮೀರ ಕುರಿತು ಮಾತನಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅಫ್ರಿದಿ ಓರ್ವ ಜೋಕರ್, ತನ್ನ ಹೇಳಿಕೆಗಳಿಂದ ಪಾಕ್ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಜರಿದಿದ್ದಾರೆ.
ಟ್ವೀಟ್ ಮೂಲಕ ಕಿಡಿಕಾರಿರುವ ಗಂಭೀರ್, 20 ಕೋಟಿ ಜನರೊಂದಿಗೆ ಪಾಕ್ 7 ಲಕ್ಷ ಸೇನಾ ಬಲವನ್ನು ಹೊಂದಿದೆ ಎಂದು 16 ವರ್ಷದ ಹುಡುಗನ ಸಹ ಹೇಳುತ್ತಾನೆ. ಕಳೆದ 20 ವರ್ಷಗಳಿಂದ ಕಾಶ್ಮೀರವನ್ನು ಪಾಕ್ ಭಿಕ್ಷೆ ಬೇಡುತ್ತಲೇ ಬಂದಿದೆ. ಅಫ್ರಿದಿ, ಇಮ್ರಾನ್ ಖಾನ್ ಮತ್ತು ಬಾಜ್ವಾರಂತಹ ಜೋಕರ್ಗಳು ಭಾರತ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ವಿಷಕಾರುತ್ತಾ ಪಾಕ್ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದರೆ, ಎಂದಿಗೂ ಕಾಶ್ಮೀರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಬಾಂಗ್ಲಾದೇಶ ನೆನಪಿದೆಯೇ? ಎಂದು ಟೀಕಾಸ್ತ್ರ ಪಯೋಗಿಸಿದ್ದಾರೆ.
ಇದಕ್ಕೂ ಮುನ್ನ ಅಫ್ರಿದಿ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯರಿಗೆ ನೆರವು ನೀಡಿ, ವಿಶ್ವವು ಜೀವಕಾರದ ರೋಗಕ್ಕೆ ಸಿಲುಕಿದೆ. ಆದರೆ, ಮೋದಿ ಹೃದಯ ಮತ್ತು ಮನಸ್ಸಿನಲ್ಲಿ ಅದಕ್ಕಿಂತಲೂ ಹೆಚ್ಚಿನ ಅಪಾಯಕಾರಿ ಏನಿದೆಯೋ ಎಂದು ಉದ್ಧಟತನದ ಹೇಳಿಕೆ ನೀಡಿದ್ದರು.
ಇನ್ನು ಅಫ್ರಿದಿ ಹಾಗೂ ಗಂಭೀರ್ ನಡುವಿನ ಕಿತ್ತಾಟ ಇದೇ ಮೊದಲೇನಲ್ಲ. ಕ್ರಿಕೆಟ್ ಮೈದಾನದಲ್ಲೂ ಕಿತ್ತಾಡಿಕೊಂಡಿರುವ ಉಭಯ ಆಟಗಾರರು ಆಗಾಗ ಜಾಲತಾಣದಲ್ಲಿ ಒಬ್ಬರಿಗೊಬ್ಬರನ್ನು ಕಾಲೆಳೆಯುವ ಮೂಲಕ ಕಾದಾಟಕ್ಕೆ ಇಳಿಯುತ್ತಾರೆ. ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ಗಂಭೀರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದಕ್ಕೆ ಗಂಭೀರ್ ಕೂಡ ಈ ಹಿಂದೆಯೇ ಟ್ವೀಟ್ ಮೂಲಕವೇ ಉತ್ತರ ನೀಡಿದ್ದರು. (ಏಜೆನ್ಸೀಸ್)