ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು 2022ರ ಡಿಸೆಂಬರ್ 30 ರಂದು ಕಾರು ಅಪಘಾತಕ್ಕೊಳಗಾದ ಸಂಗತಿ ಎಲ್ಲರಿಗೂ ತಿಳಿದಿದೆ. ಅದೃಷ್ಟವಶಾತ್ ಪಂತ್ ಅಪಘಾತದಿಂದ ಪಾರಾದರು. ಆದರೆ ಈ ಅಪಘಾತದಲ್ಲಿ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದರಿಂದಾಗಿ ಸುಮಾರು 18 ತಿಂಗಳ ಕಾಲ ಕ್ರಿಕೆಟ್ನಿಂದ ಪಂತ್ ದೂರ ಉಳಿಯಬೇಕಾಯಿತು.
ಆದರೆ, ಪಂತ್ ಇಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹಠಕ್ಕೆ ಬಿದ್ದವರಂತೆ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಚೇತರಿಸಿಕೊಂಡ ಪಂತ್, ಈ ಬಾರಿಯ ಐಪಿಎಲ್ ಸೀಸನ್ಗೆ ಎಂಟ್ರಿ ಕೊಡುವುದಷ್ಟೇ ಅಲ್ಲ, ಅದ್ಬುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅಲ್ಲದೆ, ಮುಂಬರುವ ಟಿ20 ವಿಶ್ವಕಪ್ಗೂ ಪಂತ್ ಆಯ್ಕೆಯಾಗಿದ್ದಾರೆ. ಇದರ ನಡುವೆ ಇತ್ತೀಚಿಗೆ ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ಪಂತ್ ಅಪಘಾತವನ್ನು ನೆನಪಿಸಿಕೊಂಡು ಭಾವುಕರಾದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನ ನಂತರ ಶಾರುಖ್ ಮೈದಾನಕ್ಕೆ ಬಂದು ಎಲ್ಲ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಿಂಗ್ ಖಾನ್ ಶಾರುಖ್ ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನಕ್ಕೆ ಸಂಬಂಧಿಸಿದ ಪ್ರೋಮೋವನ್ನು ಸ್ಟಾರ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ರಿಷಭ್ ಪಂತ್ ಅಪಘಾತವನ್ನು ಮೆಲುಕು ಹಾಕಿದ ಶಾರುಖ್ ಭಾವುಕರಾದರು.
ಆ ದಿನ ನಾನು ರಿಷಭ್ ಪಂತ್ ಅಪಘಾತದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೆ. ಅಪಘಾತದ ವಿಡಿಯೋ ನೋಡಿ ಬೆಚ್ಚಿಬಿದ್ದಿದೆ. ಯುವಕರಿಗೆ ಇಂತಹ ಅವಘಡಗಳು ಸಂಭವಿಸುತ್ತಿರುವುದು ತುಂಬಾ ಬೇಸರದ ಸಂಗತಿ. ಆದರೆ, ಪಂತ್ ಅವರು ಆ ಅಪಘಾತದಿಂದ ಚೇತರಿಸಿಕೊಂಡು ಹಿಂತಿರುಗಿದ ರೀತಿ ಅದ್ಭುತವಾಗಿದೆ. ಅವರು ತಮ್ಮ ಕಾಲಿನ ಶಸ್ತ್ರಚಿಕಿತ್ಸೆಯಿಂದ ಬೇಗನೆ ಚೇತರಿಸಿಕೊಂಡರು. ಅವರ ಭವಿಷ್ಯ ಅದ್ಬುತವಾಗಿರಲಿ ಎಂದು ನಾನು ಬಯಸುತ್ತೇನೆ ಎಂದು ಶಾರುಖ್ ಭಾವುಕರಾಗಿ ನುಡಿದರು. ಇದೇ ಶುಕ್ರವಾರ (ಮೇ 1) ಈ ಸಂದರ್ಶನದ ಭಾಗ 1ರ ಸಂಪೂರ್ಣ ಸಂಚಿಕೆ ಪ್ರಸಾರವಾಗಲಿದೆ. (ಏಜೆನ್ಸೀಸ್)