ಕ್ರೀಡೆ

ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಜಯ; ಮೂರನೇ ಬಾರಿಗೆ ಫೈನಲ್ ಪ್ರವೇಶ

ಸಿಡ್ನಿ: ಟಿ-20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್​​ಗಳ ಜಯ ದಾಖಲಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್​ನಲ್ಲಿ 152 ರನ್​ ಕಲೆಹಾಕಿತ್ತು.

ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಫಿನ್ ಅಲೆನ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಡಿವೋನ್ ಕಾನ್ವೆ ಆಟ 29 ರನ್​ಗಳಿಗೆ ಅಂತ್ಯವಾಯ್ತು. ಈ ವೇಳೆ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಆಧಾರವಾದರು. ಆದರೆ 46 ಗಳಿಸಿದ್ದ ವೇಳೆ ಅಫ್ರಿದಿ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಕ್ರಿಸ್ ಕಚ್ಚಿ ನಿಂತ ಡೇರಿಲ್ ಮಿಚೆಲ್ ಅರ್ಧಶತಕ ಬಾರಿಸಿ ಮಿಂಚಿದರು. ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದ ಮಿಚೆಲ್ 53 ರನ್​ ಗಳಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನದ ಪರ ಶಾಹಿನ್ ಅಫ್ರಿದಿ 2 ವಿಕೆಟ್ ಕಬಳಿಸಿ ಮಿಂಚಿದರು.

153 ರನ್​ಗಳ ಟಾರ್ಗೆಟ್ ಬೆನ್ನು ಹತ್ತಿದ ಪಾಕಿಸ್ತಾನ ತಂಡ ಉತ್ತಮ ಆರಂಭವನ್ನೇ ಕಂಡಿತ್ತು. ಮೊದಲ ವಿಕೆಟ್​ಗೆ ನಾಯಕ ಬಾಬರ್ ಅಝಮ್ ಹಾಗೂ ಮೊಹಮ್ಮದ್ ರಿಝ್ವಾನ್ 105 ರನ್​ಗಳ ಜೊತೆಯಾಟದ ಇನ್ನಿಂಗ್ಸ್​​ ಕಟ್ಟಿದರು. ಈ ವೇಳೆ 53 ರನ್ ಗಳಿಸಿ ವಿಕೆಟ್ ಒಪ್ಪಸಿದರೆ, ರಿಝ್ವಾನ್ 57 ರನ್ ಗಳಿಸಿ ಔಟ್ ಆದರು. ಜವಾಬ್ದಾರಿಯುತವಾಗಿ ಆಡುತ್ತಿದ್ದ ಮಹಮ್ಮದ್ ಹ್ಯಾರಿಸ್ 30 ರನ್​ಗಳಿಸಿದ್ದ ವೇಳೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊನೆಯಲ್ಲಿ ಶ್ಯಾನ್ ಮಸೂದ್ ತಂಡವನ್ನು ಜಯದ ಗಡಿ ದಾಟಿಸಿದರು.

ಈ ಮೂಲಕ ಪಾಕಿಸ್ತಾನ 3ನೇ ಬಾರಿಗೆ ಟಿ-20 ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದೆ. ನಾಳೆ ನಡೆಯುವ ಭಾರತ-ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯದ ನಂತರ ಪಾಕಿಸ್ತಾನ ಎದುರಾಳಿ ಯಾರು ಎಂದು ಗೊತ್ತಾಗಬಹುದು. (ಏಜೆನ್ಸೀಸ್)