ಕ್ರೀಡೆ

ಸ್ವಾರ್ಥವನ್ನು ತೋರಿಸಿ... Ashwin ನಿವೃತ್ತಿ ಕುರಿತು ಶಾಕಿಂಗ್​ ಹೇಳಿಕೆ ನೀಡಿದ ಲೆಜೆಂಡರಿ ಆಟಗಾರ

ನವದೆಹಲಿ: ಟೀಮ್​ ಇಂಡಿಯಾದ ಲೆಜೆಂಡರಿ ಆಟಗಾರ ಆರ್​. ಅಶ್ವಿನ್ (Ashwin)​ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್ ಸರಣಿಯ (Border-Gavaskar Trophy Test Series) ಮಧ್ಯದಲ್ಲೇ ನಿವೃತ್ತಿಯನ್ನು ಘೋಷಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದರು. ಇನ್ನೂಅಶ್ವಿನ್​ ನಿವೃತ್ತಿ ಘೋಷಿಸಿರುವ ನಿರ್ಧಾರಕ್ಕೆ ಈಗಲೂ ಹಲವರು ಅಚ್ಚರಿ ವ್ಯಕ್ತಪಡಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಮಾಜಿ ಆಟಗಾರರೊಬ್ಬರು ಅಶ್ವಿನ್​ರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡೆರಿಲ್​ ಕಲ್ಲಿನನ್, ಅಶ್ವಿನ್​ ಬಾರ್ಡರ್​-ಗವಾಸ್ಕರ್​ ಟ್ರೋಫಿ ಮಧ್ಯದಲ್ಲಿ ನಿವೃತ್ತಿಯನ್ನು ಘೋಷಿಸಿದರು. ಸರಣಿಯಲ್ಲಿ ಒಂದು ಪಂದ್ಯವನ್ನು ಆಡಿದ್ದ ಅಶ್ವಿನ್​ ಯಾವುದೇ ವಿದಾಯ ಆಟವಿಲ್ಲದೆ ನಿರ್ಗಮಿಸಿದರು. ಅವರು ಸಾಧ್ಯವಾದಷ್ಟು ನಿರ್ಲಕ್ಷವಾಗಿ ಕ್ರಿಕೆಟ್​ಗೆ ನಿವೃತ್ತಿಯನ್ನು ಘೋಷಿಸಿದ್ದು, ಇದು ಅವರ ಸ್ವಾರ್ಥ ನಡೆಯಾಗಿದೆ.

ನನ್ನ ಪ್ರಕಾರ ಅಶ್ವಿನ್​ ಅವರಿಗೆ ಸರಣಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಲು ಅವಕಾಶ ನೀಡಬಾರದಿತ್ತು. ಅವರು ನಿವೃತ್ತಿಗೆ ಸ್ಪಷ್ಟ ಕಾರಣಗಳನ್ನು ಉಲ್ಲೇಖಿಸದೆ ತಮ್ಮ ಸ್ವಾರ್ಥವನ್ನು ತೋರಿಸಿದ್ದಾರೆ. ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳದಿರುವುದಕ್ಕೆ ಈ ರೀತಿ ಮಾಡಿದ್ದರೆ ಅದು ಸರಿ ಹೋಗುವುದಿಲ್ಲ. ಸಿಡ್ನಿ ಟೆಸ್ಟ್​ ಬಳಿಕ ನಿವೃತ್ತಿ ಘೋಷಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಡೆರಿಲ್​ ಕಲ್ಲಿನನ್ ಅಭಿಪ್ರಾಯಪಟ್ಟಿದ್ದಾರೆ. 

ಅಂದಹಾಗೆ ಅಶ್ವಿನ್​ (R Ashwin) ಅವರು 106 ಟೆಸ್ಟ್‌ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್​ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್​ ಕೊನೆಗೊಳಿಸಿದರು. ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.