ಕ್ರೀಡೆ

ಆರ್​ಸಿಬಿ ಸೋಲಿಸಿ ಮಾನವೀಯತೆ ಉಳಿಸಿ! ಫೈನಲ್​ಗೂ ಮುನ್ನವೇ ಶುರುವಾಯ್ತು ಹೊಸ ಟ್ರೆಂಡ್​ | RCB

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತಮ್ಮ ಬಹುನಿರೀಕ್ಷಿತ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್​​ನಲ್ಲಿ ಫೈನಲ್ ತಲುಪಿರುವ ಆರ್​ಸಿಬಿ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಗುರುವಾರ (ಮೇ 29) ಮುಲ್ಲನ್ಪುರದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿ, ಫೈನಲ್‌ ಲಗ್ಗೆ ಇಟ್ಟಿದೆ. 2016ರ ನಂತರ ಆರ್‌ಸಿಬಿ ಫೈನಲ್ ತಲುಪಿದ್ದು ಇದೇ ಮೊದಲು.

ಆರ್​ಸಿಬಿ ಮೊದಲ ಬಾರಿಗೆ ಐಪಿಎಲ್​ ಟ್ರೋಫಿಗೆ ಮುತ್ತಿಡುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗದ ಮಂದಿ ಆರ್​ಸಿಬಿ ಗೆಲ್ಲದಿರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆರ್​ಸಿಬಿ ಸೋಲಿಸಿ, ಮಾನವೀಯತೆ ಉಳಿಸಿ ಎಂದು ಟ್ರೆಂಡ್​ ಶುರು ಮಾಡಿದ್ದಾರೆ.

ಕೆಲವು ಮಂದಿಗೆ ಆರ್​ಸಿಬಿ ಟ್ರೋಫಿ ಜಯಿಸುವುದು ಇಷ್ಟವಿಲ್ಲ. ಫೈನಲ್​ಗೆ ತಲುಪಿರುವುದರಿಂದ ನೆಗೆಟಿವ್​ ಟ್ರೆಂಡ್​ ಮಾಡಲು ಪ್ರಯತ್ನಿಸಿದ್ದಾರೆ. ಭಾರತ ಶಬ್ಧ ಮಾಲಿನ್ಯಕ್ಕೆ ಸಿದ್ಧವಿಲ್ಲ, ಭೂಮಿಯನ್ನು ಕಾಪಾಡಿ, ಮಾನವೀಯತೆ ಉಳಿಸಿ ಎಂದು ನೇರವಾಗಿ ಆರ್​ಸಿಬಿ ಗುರಿಯಾಗಿಸಿಕೊಂಡು ನೆಟ್ಟಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಭೂಮಿಯನ್ನು ರಕ್ಷಿಸಿ, ಮಾನವೀಯತೆ ಉಳಿಸಿ ಎಂದು ಕಾಮೆಂಟ್​ ಮಾಡಿದ್ದಾರೆ. ಹೀಗೆ ಅನೇಕ ಮಂದಿ ನೆಗೆಟಿವ್​ ಆಗಿ ಕಾಮೆಂಟ್​ ಮಾಡಿದ್ದಾರೆ. ಆರ್​ಸಿಬಿ ಕಪ್​ ಗೆಲ್ಲಬಾರದೆಂಬುದೇ ಅವರ ಮೂಲ ಉದ್ದೇಶ.

ಆರ್​ಸಿಬಿ ಕಪ್​ ಗೆದ್ದರೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟುತ್ತದೆ. ಇದುವರೆಗೂ ಐಪಿಎಲ್​ನಲ್ಲಿ ಯಾರೂ ಮಾಡಿರದ ಸಂಭ್ರಮಾಚರಣೆಯನ್ನು ಆರ್​ಸಿಬಿ ಅಭಿಮಾನಿಗಳು ಮಾಡುವುದಂತೂ ಸತ್ಯ. ಎಲ್ಲೆಡೆ ಆರ್​ಸಿಬಿ... ಆರ್​ಸಿಬಿ ಘೋಷಣೆ ಮುಗಿಲು ಮುಟ್ಟುತ್ತದೆ. ಹೀಗಾಗಿ ಆರ್​ಸಿಬಿ ಸೋಲಿಸಿ ಭೂಮಿ ಉಳಿಸಿ ಎಂದು ಅಣಕಿಸುತ್ತಿದ್ದಾರೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ದೇಶಿ ಕ್ರಿಕೆಟ್​ ತಂಡವೆಂದರೆ ಅದು ಆರ್​ಸಿಬಿ. ಅದು ಕೂಡ ನಿಷ್ಠಾವಂತ ಅಭಿಮಾನಿಗಳು. ಇದನ್ನು ಎಷ್ಟೋ ಮಂದಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ರೀತಿ ನೆಗೆಟಿವ್​ ಟ್ರೆಂಡ್​ ಮಾಡಲು ಪ್ರಯತ್ನಿಸುತ್ತಿದ್ದಾರೆ.

ನೆಗೆಟಿವ್​ ಟ್ರೆಂಡ್​ಗೆ ಸಂಬಂಧಿಸಿದ ಸ್ಕ್ರೀನ್​ ಶಾಟ್​ ಅನ್ನು ಹಂಚಿಕೊಂಡು ಆರ್​ಸಿಬಿ ಅಭಿಮಾನಿಯೊಬ್ಬರು ಬೇಸರ ಹೊರಹಾಕಿದ್ದಾರೆ. ಮಾನವೀಯತೆಯನ್ನು ಉಳಿಸುವುದೇ? ಯಾವುದರಿಂದ? 17 ವರ್ಷಗಳ ನೋವು, ಅವಮಾನ ಮತ್ತು ದುಃಖದ ನಂತರ ತಮ್ಮ ಮೊದಲ ಐಪಿಎಲ್ ಗೆಲ್ಲಲಿರುವ ತಂಡ? ನಿಜಕ್ಕೂ ಇದು ಹುಚ್ಚುತನದ ದ್ವೇಷ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ವೈರಲ್​ ಆಗಿದ್ದು, ನೆಗೆಟಿವ್​ ಟ್ರೆಂಡ್ ಮಾಡಿದವರ ವಿರುದ್ಧ ಟೀಕಾ ಪ್ರಹಾರ ನಡೆಯುತ್ತಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಕೇವಲ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆರ್​ಸಿಬಿ ಯಶಸ್ವಿಯಾಯಿತು. ಪಂಜಾಬ್​ ಪರ ಮಾರ್ಕಸ್ ಸ್ಟೊಯಿನಿಸ್ (26) ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡರು. ಆರ್‌ಸಿಬಿ ಬೌಲರ್‌ಗಳಲ್ಲಿ ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಸಲ್‌ವುಡ್ ತಲಾ ಮೂರು ವಿಕೆಟ್ ಪಡೆದರು. ಯಶ್ ದಯಾಳ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಪಂಜಾಬ್​ ನೀಡಿದ ಸಣ್ಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ, ಫಿಲ್ ಸಾಲ್ಟ್ (56 ರನ್​, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಪಂಜಾಬ್ ಬೌಲರ್‌ಗಳಾದ ಮುಶೀರ್ ಖಾನ್ ಮತ್ತು ಕೈಲ್ ಜೇಮಿಸನ್ ತಲಾ ಒಂದು ವಿಕೆಟ್ ಪಡೆದರು. 8 ವಿಕೆಟ್​ಗಳಿಂದ ಕ್ವಾಲಿಫೈಯರ್​ 1ರಲ್ಲಿ ಗೆದ್ದ ಆರ್​ಸಿಬಿ, 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್​ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. (ಏಜೆನ್ಸೀಸ್​)