ಕ್ರೀಡೆ

ಜಡೇಜಾ, ದುಬೆ ಅಲ್ವೇ ಅಲ್ಲ! ಇವರೇ ಟಿ20 ವಿಶ್ವಕಪ್​ನ ನಂ.1 ಆಲ್​ರೌಂಡರ್​ ಎಂದ ಮಂಜ್ರೇಕರ್​; ಯಾರು ಆ ಆಟಗಾರ?

ನವದೆಹಲಿ: ಪ್ರಸಕ್ತ ಟಿ20 ವಿಶ್ವಕಪ್​ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕಾದಲ್ಲಿ ನಡೆಯಲಿದ್ದು, ಭರ್ಜರಿ ಪೈಪೋಟಿ ಕೊಡಲು 20 ಬಲಿಷ್ಠ ತಂಡಗಳು ಸಜ್ಜಾಗಿವೆ. ಜೂನ್ 05ರಂದು ನಡೆಯಲಿರುವ ಐರ್ಲೆಂಡ್​ ವಿರುದ್ಧದ ಮೊದಲ ಪಂದ್ಯಕ್ಕೆ ಈಗಾಗಲೇ ಟೀಂ ಇಂಡಿಯಾ ಸನ್ನದ್ಧಗೊಂಡಿದೆ. ಇನ್ನು ಅತ್ಯುತ್ತಮ ಫಾರ್ಮ್​ನಲ್ಲಿರುವ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬರುವ ಪಂದ್ಯಗಳಲ್ಲಿ ಉತ್ತಮ ಓಪನಿಂಗ್ ನೀಡಲು ಎದುರು ನೋಡುತ್ತಿದ್ದಾರೆ.

ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದ್ದು, ಅನುಭವಿ ಹಾಗೂ ಯುವ ಆಟಗಾರರ ಸಮಾಗಮ ತಂಡದಲ್ಲಿದೆ. ಇದರ ಜತೆಗೆ ಆಲ್​ರೌಂಡರ್​ಗಳ ಪ್ರದರ್ಶನ ಕೂಡ ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಕಾರಣವಾಗಲಿದೆ. ಈ ಕುರಿತು ಮಾಜಿ ಕ್ರಿಕೆಟಿಗರು ಸಹ ಹಲವಾರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದ್ರೆ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಆದ ಸಂಜಯ್ ಮಂಜ್ರೇಕರ್​, ನನ್ನ ಪ್ರಕಾರ, ಟಿ20 ವಿಶ್ವಕಪ್​ 2024ರಲ್ಲಿ ಇವರೇ ಬೆಸ್ಟ್​ ಆಲ್​ರೌಂಡರ್ ಆಗಿ ಹೊರಹೊಮ್ಮುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಪಸ್ತುತ ಟೀಂ ಇಂಡಿಯಾದಲ್ಲಿರುವ ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​ನಂತಹ ಆಲ್​-ರೌಂಡರ್​ಗಳನ್ನು ಬದಿಗಿಟ್ಟು ಮಾತನಾಡಿದ ಮಂಜ್ರೇಕರ್​, "ನನ್ನ ಪ್ರಕಾರ ತಂಡದ ಉಪನಾಯಕರಾದ ಹಾರ್ದಿಕ್​ ಪಾಂಡ್ಯ ಐಸಿಸಿ ಟಿ20 ವಿಶ್ವಕಪ್​ 2024ರಲ್ಲಿ ಸ್ಟಾರ್​ ಹಾಗೂ ಬೆಸ್ಟ್​ ಆಲ್​ರೌಂಡರ್​ ಆಗಿ ಹೊರಹೊಮ್ಮುತ್ತಾರೆ. ಹಾಗಾಗಿ ನನ್ನ ಮತ ಯಾವಾಗಲೂ ಹಾರ್ದಿಕ್ ಪಾಂಡ್ಯ ಅವರಿಗೇ ಇರುತ್ತದೆ" ಎಂದರು.

"ಐಪಿಎಲ್‌ನಲ್ಲಿ ಹಾರ್ದಿಕ್​ ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ವಿಷಯ ನನಗೆ ತಿಳಿದಿದೆ. ಆದರೆ ವಿಶ್ವಕಪ್ ಅದಕ್ಕಿಂತ ವಿಭಿನ್ನ ಟೂರ್ನಿಯಾಗಿದೆ. ಹಿಂದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಪಾಂಡ್ಯ ನೀಡಿದ್ದ ಪವರ್​ಫುಲ್​ ಫಿಫ್ಟಿ ಪ್ಲಸ್ ಸ್ಕೋರ್​ ಮರೆಯುವಂತಿಲ್ಲ" ಎಂದು ಮಂಜ್ರೇಕರ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).