ಕ್ರೀಡೆ

ಸೈನಾ ಪಾಸಿಟಿವ್, ಕೆಲವೇ ಗಂಟೆಗಳಲ್ಲಿ ನೆಗೆಟಿವ್..!

raghukittur

ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಮುನ್ನ ಭಾರತದ ಷಟ್ಲರ್‌ಗಳಾದ ಸೈನಾ ನೆಹ್ವಾಲ್ ಮತ್ತು ಎಚ್‌ಎಸ್ ಪ್ರಣಯ್ ಕರೊನಾ ಸೋಂಕಿನ ಪಾಸಿಟಿವ್-ನೆಗೆಟಿವ್ ಗೊಂದಲ ಎದುರಿಸಿದ್ದಾರೆ. 3ನೇ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಮೊದಲಿಗೆ ಸ್ಪರ್ಧೆಗೆ ತಡೆಯೊಡ್ಡಿದರೆ, ಬಳಿಕ 4ನೇ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ಟೂರ್ನಿಯಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ. ಥಾಯ್ಲೆಂಡ್ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಟಿ) ಹಾಗೂ ವಿಶ್ವ ಬ್ಯಾಡ್ಮಿಂಟನ್ ೆಡರೇಷನ್ (ಬಿಡಬ್ಲ್ಯುಎ್) ಈ ಬಗ್ಗೆ ಜಂಟಿಯಾಗಿ ಹೇಳಿಕೆ ಹೊರಡಿಸಿವೆ.

ಟೂರ್ನಿ ಆರಂಭಕ್ಕೆ ಮುನ್ನ ಕರೊನಾ ಕಾಣಿಸಿಕೊಂಡಿದೆ ಎಂದು ತಿಳಿಸಿ ಷಟ್ಲರ್‌ಗಳನ್ನು ಆಸ್ಪತ್ರೆಗೆ ದಾಖಲಿಸಿ, ಎದುರಾಳಿಗೆ ವಾಕ್ ಓವರ್ ನೀಡಲಾಗಿತ್ತು. ಇದರಿಂದ ಎಚ್ಚೆತ್ತ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಒಂದು ವೇಳೆ ಪರೀಕ್ಷಾ ವರದಿ ನೆಗೆಟಿವ್ ಬಂದರೆ ಪಂದ್ಯಗಳನ್ನು ಮರುನಿಗದಿ ಪಡಿಸಬೇಕು ಎಂದು ಕೇಳಿಕೊಂಡಿದ್ದರು. ಸೈನಾ ಜತೆಗಿನ ನಿಕಟ ಸಂಪರ್ಕದಿಂದಾಗಿ ಅವರ ಪತಿ ಪಿ.ಕಶ್ಯಪ್‌ರನ್ನೂ ಸ್ಪರ್ಧೆಯಿಂದ ಹೊರಗಿಡಲಾಗಿತ್ತು. ಇದೀಗ ಮೂವರಿಗೂ ಬುಧವಾರ ಮೊದಲ ಸುತ್ತಿನ ಪಂದ್ಯ ಆಡಲು ಅವಕಾಶ ನೀಡಲಾಗಿದೆ.

ಆಯೋಜಕರ ವಿರುದ್ಧ ಕಿಡಿಕಾರಿದ್ದ ಸೈನಾ: ಇದಕ್ಕೂ ಮೊದಲು ಕರೊನಾ ಪರೀಕ್ಷೆಯ ವರದಿ ನೀಡದೆ ಕೇವಲ ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದ್ದ ಆಯೋಜಕರ ವಿರುದ್ಧ ಸೈನಾ ಕಿಡಿಕಾರಿದ್ದರು. ಸ್ಥಳೀಯ ನಿಯಮದ ಪ್ರಕಾರ ಕರೊನಾ ಪರೀಕ್ಷಾ ವರದಿಯೂ 5 ಗಂಟೆಗಳಲ್ಲಿ ಬರಬೇಕು, ಆದರೆ ನನ್ನ ಪ್ರಕರಣದಲ್ಲಿ ಈ ನಿಯಮ ಪಾಲಿಸುತ್ತಿಲ್ಲ. ಸೋಮವಾರದಿಂದಲೂ ವರದಿಗಾಗಿ ಕಾಯುತ್ತಿರುವೆ. ಏಕಾಏಕಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇದು ಸಂಪೂರ್ಣ ಗೊಂದಲಮಯವಾಗಿದೆ. ಅಭ್ಯಾಸಕ್ಕೆ ಇಳಿಯುವ ವೇಳೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಯಿತು ಎಂದು ಸೈನಾ ಆಕ್ರೋಶ ವ್ಯಕ್ತಪಡಿಸಿದ್ದರು.