ಕ್ರೀಡೆ

VIDEO: ಭಾರತ v/s ಆಸ್ಟ್ರೇಲಿಯಾ: ಟಿಕೆಟ್​ಗಾಗಿ ನೂಕು ನುಗ್ಗಲು- ಕಾಲ್ತುಳಿತಕ್ಕೆ ಹಲವರಿಗೆ ಗಾಯ

ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ 2ನೇ ಟಿ20 ಮ್ಯಾಚ್​ಗಾಗಿ ಟಿಕೆಟ್ ಖರೀದಿಸಲು ಹೈದರಾಬಾದ್​ನ ಜಿಮ್​ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿ ಬಂದು ಕಾಲ್ತುಳಿತ ಉಂಟಾಯಿತು. ಘಟನೆಯಲ್ಲಿ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಹಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಆರಂಭವಾಗಲಿದೆ. ಹೀಗಾಗಿ ಇಲ್ಲಿ ಪ್ರೇಕ್ಷಕರಿಗೆ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಏಕಾಏಕಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಜಿಮ್ಖಾನಾ ಮೈದಾನದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಬಂದ ಕಾರಣದಿಂದ ಕಾಲ್ತುಳಿತ ಸಂಭವಿಸಿದೆ. ಕ್ರೀಡಾಂಗಣದ ಒಳಗೆ ಪ್ರವೇಶಿಸಲೆಂದು ಅಭಿಮಾನಿಗಳು ಗೇಟ್​ ಒಡೆದ ಹಿನ್ನೆಲೆಯಲ್ಲಿ ಈ ಗಲಾಟೆ ಆಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಟಿಕೆಟ್​ಗಾಗಿ ಬೆಳಗ್ಗೆ 5 ಗಂಟೆಯಿಂದಲೇ ಕ್ಯೂ ನಿಲ್ಲಲಾಗಿತ್ತು. ಟಿಕೆಟ್ ಕೌಂಟರ್​ಗಳನ್ನು 10 ಗಂಟೆಗೆ ತೆರೆಯಲಾಯಿತು. ಏಕಕಾಲಕ್ಕೆ 20 ಮಂದಿಯನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಆದರೆ ಇದು ಅಭಿಮಾನಿಗಳನ್ನು ಕೆರಳಿಸಿದೆ. ಟಿಕೆಟ್​ ಕೊಡಲು ತಡವಾಗುತ್ತಿದೆ ಎಂದು ಆಕ್ರೋಶದಿಂದ ಏಕಾಏಕಿ ನುಗ್ಗಿದರು. ಇದರಿಂದಾಗಿ ಕಾಲ್ತುಳಿತ ಉಂಟಾಯಿತು.

ಆನ್​ಲೈನ್ ಪೇಮೆಂಟ್​ಗೆ ಅವಕಾಶವಿರಲಿಲ್ಲ, ಸ್ಥಳಕ್ಕೆ ಹೋಗಿ ನಗದು ಕೊಟ್ಟೇ ಟಿಕೆಟ್​ ಖರೀದಿ ಮಾಡಬೇಕಿತ್ತು. ಇದರಿಂದಲೂ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ಒಬ್ಬರಿಗೆ ಎರಡು ಟಿಕೆಟ್ ಮಾತ್ರ ಕೊಡಲಾಗುತ್ತಿದೆ. ಟಿಕೆಟ್​ಗಾಗಿ ಬರುವವರು ಆಧಾರ್​ ಕಾರ್ಡ್​ನ ಜೆರಾಕ್ಸ್​ ಪ್ರತಿಯೊಂದಿಗೆ ಇಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಕೊಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಎಲ್ಲಾ ಪರಿಶೀಲನೆ ಮಾಡಿ ಟಿಕೆಟ್​ ಕೊಡುತ್ತಿದ್ದ ಕಾರಣ, ಟಿಕೆಟ್​ ಕೊಡಲು ವಿಳಂಬವಾಗಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. (ಏಜೆನ್ಸೀಸ್​)