More

    ಲಿಫ್ಟ್​ ನೀಡಿದ ಬೈಕ್​ ಸವಾರನಿಗೆ ಇಂಜೆಕ್ಷನ್​ ಚುಚ್ಚಿ ಕೊಲೆ: ಪತ್ನಿಯ ಫೋನ್​ಕಾಲ್​ನಲ್ಲಿತ್ತು ಭಯಾನಕ ರಹಸ್ಯ…

    ಹೈದರಾಬಾದ್: ಇತ್ತೀಚೆಗೆ ತೆಲಂಗಾಣದ ವಾಹನ ಸವಾರರು ರಸ್ತೆಗೆ ಇಳಿಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ, ಲಿಫ್ಟ್​ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ವಿಷದ ಇಂಜೆಕ್ಷನ್​ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಯುವ ಮುನ್ನ ಆತ ನೀಡಿದ್ದ ಹೇಳಿಕೆಯಿಂದಾಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗಿತ್ತು. ವಾಹನದಲ್ಲಿ ಹೋಗಲು ಸವಾರರು ಬೆದರುವ ಸ್ಥಿತಿ ಉಂಟಾಗಿತ್ತು.

    ಆದರೆ ಪೊಲೀಸ್​ ತನಿಖೆಯಿಂದ ಭಯಾನಕ ರಹಸ್ಯ ಬಯಲಾಗಿದ್ದು, ವಾಹನ ಸವಾರರು ಸ್ವಲ್ಪ ನಿರಾಳವಾಗಿದ್ದಾರೆ. ಇದಕ್ಕೆ ಕಾರಣ, ವಾಹನ ಸವಾರನನ್ನು ಕೊಲ್ಲುವ ಉದ್ದೇಶಕ್ಕಾಗಿಯೇ ಲಿಫ್ಟ್​ ಕೇಳಲಾಗಿತ್ತು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

    ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದ ಈ ಘಟನೆ ನಡೆದಿತ್ತು. ಬೊಪ್ಪರಂ ಗ್ರಾಮದ ಜಮಾಲ್ ಸಾಹೇಬ್ ಎಂಬುವವರಿಗೆ ಇಂಜೆಕ್ಷನ್ ಚುಚ್ಚಲಾಗಿತ್ತು. ಸ್ವಲ್ಪ ದೂರ ಹೋದ ನಂತರ ಬೈಕ್​ ಮೇಲಿಂದ ಬಿದ್ದ ಜಮಾಲ್ ಸಾಹೇಬ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಸಾಯುವ ಮುನ್ನ ಯಾರೋ ಇಂಜೆಕ್ಷನ್​ ಚುಚ್ಚಿರುವುದನ್ನು ತಿಳಿದಿದ್ದರು. ಅದರ ಬೆನ್ನತ್ತಿ ಹೋದ ಪೊಲೀಸರಿಗೆ ಈ ಕೆಲಸ ಮಾಡಿಸಿದ್ದ ಪತ್ನಿ ಇಮಾಂಬಿ ಎಂಬುದು ಈಗ ತಿಳಿದುಬಂದಿದೆ.

    ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಜಮಾಲ್ ಸಾಹೇಬ್ ಪತ್ನಿಯೇ ಕೊಲೆ ಮಾಡಿಸಿರುವುದು ತಿಳಿದುಬಂದಿದೆ. ಇಂಜೆಕ್ಷನ್​ ಚುಚ್ಚಿದ ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ಪೊಲೀಸರು ರಚಿಸಿದ್ದರು. ಪತ್ನಿಯ ತನಿಖೆ ಮಾಡುವಾಗ ಪೊಲೀಸರಿಗೆ ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಫೋನ್​ ಕಾಲ್ ಲಿಸ್ಟ್​ಗಳನ್ನು ಪರಿಶೀಲನೆ ಮಾಡಿದ್ದಾರೆ. ಒಂದೇ ನಂಬರ್​ಗೆ ಪತ್ನಿ ಹಲವು ಬಾರಿ ಫೋನ್​ ಮಾಡಿರುವುದು ತಿಳಿದಿದೆ.

    ಆ ನಂಬರ್​ ಬೆನ್ನತ್ತಿ ಹೋದ ಪೊಲೀಸರಿಗೆ ಇಂಜೆಕ್ಷನ್​ ಚುಚ್ಚಿದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಇಮಾಂಬಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಇದನ್ನು ಮಾಡಿಸಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ವಿಷದ ಇಂಜೆಕ್ಷನ್​ ನೀಡಲು ತನಗೆ ಡಾಕ್ಟರ್​ ವೆಂಕಟ್ ಸಹಾಯ ಮಾಡಿರುವುದಾಗಿ ಹೇಳಿದ್ದಾಳೆ. ಈ ವೈದ್ಯನ ಜತೆಗೆ, ಟ್ರ್ಯಾಕ್ಟರ್ ಚಾಲಕ ವೆಂಕಟೇಶ್ ಮತ್ತು ಮೋಹನ್ ರಾವ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    ಮೊದಲಿಗೆ ವಿಷದ ಇಂಜೆಕ್ಷನ್ ​ಅನ್ನು ಮನೆಯಲ್ಲೇ ಗಂಡನಿಗೆ ಕೊಡಬೇಕೆಂದು ಯೋಜಿಸಲಾಗಿತ್ತು. ಆದರೆ, ಧೈರ್ಯ ಸಾಲದ ಕಾರಣ ಆ ಕೆಲಸವನ್ನು ತನ್ನ ಗೆಳೆಯನಿಗೆ ಪತ್ನಿ ಒಪ್ಪಿಸಿದ್ದಳು. ಮೋಹನ್ ರಾವ್, ವೆಂಕಟೇಶ್ ಮತ್ತು ವೆಂಕಟ್ ಮೂವರು ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಅಂತೆಯೇ, ಜಮಾಲ್​ ತಮ್ಮ ಮಗಳ ಮನೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಲಿಫ್ಟ್​ ನೆಪದಲ್ಲಿ ಇಂಜೆಕ್ಷನ್​ ಕೊಟ್ಟಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. (ಏಜೆನ್ಸೀಸ್​)

    ಹಿಜಾಬ್​ ವಿರುದ್ಧದ ಪ್ರತಿಭಟನೆಗೆ ಬೆಚ್ಚಿಬಿದ್ದ ಇರಾನ್​:ಮುಸ್ಲಿಂ ರಾಷ್ಟ್ರ ಧಗಧಗ- ಏಳು ಮಂದಿ ಸಾವು, ಇಂಟರ್​ನೆಟ್​ ಸ್ಥಗಿತ

    ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts