ಕಾಶಿ: ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ಸಿಕ್ಕವ ಸಿಕ್ಕಿಬಿದ್ದ ಎನ್ನುವ ಹಳೆಯ ನಾಣ್ಣುಡಿ ಇದೆ. ಅಂಥದ್ದೇ ಒಂದು ಘಟನೆ ಕಾಶಿಯಲ್ಲಿ ನಡೆದಿದೆ. ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಮಾಡಿದ ತಪ್ಪಿಗೆ ಇದೀಗ ಅಂಬಿಗನೊಬ್ಬ ಕೋರ್ಟ್ ಅಲೆಯಬೇಕಾದ ಪ್ರಸಂಗ ಒದಗಿ ಬಂದಿದೆ.
.ಆಗಿದ್ದೇನೆಂದರೆ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಇತ್ತೀಚಿಗಷ್ಟೇ ವಾರಣಾಸಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಬೋಟ್‌ನಲ್ಲಿ ವಾಯುವಿಹಾರಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಅಲ್ಲಿರುವ ಹಕ್ಕಿಗಳಿಗೆ ಧಾನ್ಯ ತಿನ್ನಿಸಿದ್ದಾರೆ.
ಈಗೀಗ ಹಲವರಿಗೆ ಯಾವ ರೀತಿಯ ಸಾಮಾಜಿಕ ಜಾಲತಾಣದ ಕ್ರೇಜ್ ಎಂದರೆ, ಅದರಲ್ಲಿ ಫೋಟೋ ಹಾಕಿಕೊಂಡು ಎಲ್ಲರಿಂಗ ಶಹಬ್ಬಾಶಗಿರಿ ಗಿಟ್ಟಿಸಿಕೊಳ್ಳಲೋ ಎಂಬಂತೆ ಕೆಲವೊಂದು ಕಾರ್ಯಗಳನ್ನು ಮಾಡುವುದಿದೆ. ತಾವು ಏನೇ ಮಾಡಿದರೂ ಅದರ ಫೋಟೋ ಕ್ಲಿಕ್ಕಿಸಿಕೊಂಡು ಜಾಲತಾಣದಲ್ಲಿ ಹಾಕಿಕೊಂಡು ಒಂದಿಷ್ಟು ಹೊಗಳಿಕೆ ಮಾತು ಕೇಳಿಬಂದರೆ ತಾವು ಮಾಡಿದ ಕಾರ್ಯಕ್ಕೆ ಬೆಲೆ ಸಿಕ್ಕಂತೆ ಎಂದು ಅಂದುಕೊಳ್ಳುವುದು ಇದೆ.
ಅದೇನೇ ಇರಲಿ. ಒಟ್ಟಿನಲ್ಲಿ ಇಲ್ಲಿ ಆಗಿರುವುದು ಏನೆಂದರೆ, ಹಕ್ಕಿಗಳಿಗೆ ಆಹಾರ ನೀಡುತ್ತಿರುವಾಗ ತಮ್ಮ ಫೋಟೋವನ್ನು ಶಿಖರ್ ಧವನ್ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು, ‘ಹಕ್ಕಿಗಳಿಗೆ ಉಣಬಡಿಸುವುದರಲ್ಲಿ ಎಷ್ಟೊಂದು ಸಂತೋಷವಿದೆ’ ಎಂದು ಕ್ಯಾಪ್ಷನ್ ಕೊಟ್ಟುಕೊಂಡು, ತಾವು ಹಕ್ಕಿಗಳಿಗೆ ಕಾಳು ಹಾಕಿರುವುದನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಹಲವಾರು ಅಭಿಮಾನಿಗಳು ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಆದರೆ ಈಗ ಗ್ರಹಚಾರ ಬಂದಿರುವುದು ಧವನ್ ಅವರನ್ನು ಬೋಟ್‌ನಲ್ಲಿ ಕರೆದುಕೊಂಡು ಹೋದ ಅಂಬಿಗನಿಗೆ. ಏಕೆಂದರೆ ಈಗ ಹಕ್ಕಿಜ್ವರ ಭೀತಿ ಎಲ್ಲೆಡೆ ಹೆಚ್ಚಾಗಿರುವ ಕಾರಣ, ಯಾವುದೇ ಹಕ್ಕಿಗಳಿಗೆ ಆಹಾರ ಧಾನ್ಯ ಹಾಕಬಾರದು ಎನ್ನುವುದು ಸೇರಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಅಂಬಿಗರಿಗೆ ನೀಡಲಾಗಿತ್ತು. ಆದರೆ ಶಿಖರ್ ಧವನ್ ಅವರು ಕಾಳು ಹಾಕಿ ಅದರ ಫೋಟೋ ಹಾಕಿರುವುದು ವೈರಲ್ ಆಗಿತ್ತು.
ಆದ್ದರಿಂದ ಈಗ ಅಂಬಿಗ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ, ನೋಟಿಸ್ ನೀಡಿದ್ದಾರೆ. ಈ ನಿಯಮ ಉಲ್ಲಂಘಿಸಿದ ಬೋಟ್ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರವಾಸಿಗರಾಗಿ ಶಿಖರ್ ಧವನ್ ವಿರುದ್ಧ ಯಾವುದೇ ಕ್ರಮ ಜರುಗಿಸಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ, ಸ್ಥಳೀಯ ನಿಯಮಗಳನ್ನು ಪಾಲಿಸಬೇಕಾದದ್ದು ಅಂಬಿಗರ ಜವಾಬ್ದಾರಿ. ಅಲ್ಲಿಯ ನಿಯಮಗಳ ಬಗ್ಗೆ ಪ್ರವಾಸಿಗರಿಗೆ ತಿಳಿದಿಲ್ಲದಿರುವ ಕಾರಣ, ಶಿಖರ್ ಧವನ್ ಅವರ ತಪ್ಪು ಇಲ್ಲ. ಅವರಿಗೆ ಅಂಬಿಗ ಹೇಳಬೇಕಾಗಿತ್ತು ಎಂಬುದು.
ಈಗ ಅಂಬಿಗನಿಗೆ ಜಿಲ್ಲಾಡಳಿತದಿಂದ ಷೋಕಾಸ್ ನೋಟಿಸ್ ನೀಡಿದೆ. ನಿಯಮ ಉಲ್ಲಂಘನೆ ಮಾಡಿರುವ ಕಾರಣ, ಲೈಸೆನ್ಸ್ ಯಾಕೆ ಕ್ಯಾನ್ಸಲ್ ಮಾಡಬಾರದು ಅನ್ನೋದಕ್ಕೆ ಅಂಬಿಗ ಉತ್ತರ ನೀಡಬೇಕಾಗಿದೆ.